ಕಲಬುರ್ಗಿ, ಜೂ 08 (DaijiworldNews/PY) : ಮಹಾರಾಷ್ಟ್ರ ಹೊರತುಪಡಿಸಿ ಉಳಿದೆಲ್ಲಾ ರಾಜ್ಯಗಳಿಗೂ ಬಸ್ ಸಂಚಾರ ಪ್ರಾರಂಭ ಮಾಡಲು ಚಿಂತನೆ ನಡೆದಿದೆ. ಈ ಬಗ್ಗೆ ಈಗಾಗಲೇ ಎಲ್ಲಾ ರಾಜ್ಯಗಳಿಗೂ ಪತ್ರ ಬರೆದಿದ್ದು, ಅಲ್ಲಿಂದ ಒಪ್ಪಿಗೆ ದೊರೆತರೆ ಸಂಚಾರ ಪ್ರಾರಂಭಮಾಡಲಾಗುವುದು ಎಂದು ಸಾರಿಗೆ ಸಚಿವ ಲಕ್ಷ್ಮಣ ಸವದಿ ಹೇಳಿದರು.
ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಹೊರ ರಾಜ್ಯ ಪ್ರವಾಸ ಮಾಡುವವರಿಂದಲೂ ಬೇಡಿಕೆ ಬರುತ್ತಿದೆ. ರಾಜ್ಯದೊಳಗೆ ಹವಾನಿಯಂತ್ರಿತ ಸ್ಲೀಪರ್ ಕೋಚ್ ಬಸ್ಗಳ ಟಿಕೆಟ್ ಬುಕ್ಕಿಂಗ್ ಪ್ರಾರಂಭಿಸಲಾಗಿದೆ ಎಂದರು.
ಮುಂದಿನ ಮೂರು ತಿಂಗಳುಗಳಲ್ಲಿ 4,000 ಹೊಸ ಬಸ್ಗಳನ್ನು ಖರೀದಿ ಮಾಡಿ, ಸಾರಿಗೆ ನಿಗಮಗಳಿಗೆ ನೀಡಲಾಗುವುದು. ಎರಡು ತಿಂಗಳುಗಳ ಸಂಬಳವನ್ನು ಸಿಬ್ಬಂದಿಗಳಿಗೆ ನೀಡಲಾಗಿದ್ದು, ಸರ್ಕಾರವೇ ಮೇ ತಿಂಗಳ ಸಂಬಳವನ್ನು ಭರಿಸಲಿದೆ ಎಂದು ತಿಳಿಸಿದರು.
ಲಾಕ್ಡೌನ್ನಿಂದ ರಾಜ್ಯ ಸಾರಿಗೆ ಇಲಾಖೆಗೆ 2,200 ಕೋಟಿ ನಷ್ಟ ಸಂಭವಿಸಿದ್ದು, ಇದನ್ನು ಸರಿದೂಗಿಸುವ ಸಲುವಾಗಿ ಬಸ್ ಪ್ರಯಾಣದ ದರವನ್ನು ಹೆಚ್ಚಳ ಮಾಡುವುದಿಲ್ಲ. ಸದ್ಯಕ್ಕೆ 14 ಲಕ್ಷ ಪ್ರಯಾಣಿಕರು ಸರ್ಕಾರಿ ಬಸ್ಗಳಲ್ಲಿ ಸಂಚಾರ ಮಾಡುತ್ತಿದ್ದಾರೆ. ಕನಿಷ್ಠ ಒಂದು ಕೋಟಿ ಮಂದಿ ಪ್ರಯಾಣ ಮಾಡುವುದು ಎಂದಿನ ರೂಢಿ. ಸಿಬ್ಬಂದಿ ಕಡಿತ, ರಜೆ ಮೇಲೆ ಕಳುಹಿಸುವ ಕ್ರಮ ಅನುಸರಿಸುವುದಿಲ್ಲ. ಇದಕ್ಕೆ ಬದಲಾಗಿ ಸೋರಿಕೆ ತಡೆ, ಕಾರ್ಯಕ್ಷಮತೆ ವೃದ್ಧಿ ಇತರ ಪರ್ಯಾಯವಾದ ಮಾರ್ಗ ಕಂಡಿಕೊಳ್ಳುತ್ತೇವೆ ಎಂದರು.
ಸರ್ಕಾರಕ್ಕೆ ಆದಾಯ ಕಡಿಮೆಯಾಗಿದೆ. ನಿರೀಕ್ಷಿತವಾದ ಅನುದಾನವನ್ನು ಎಲ್ಲಾ ಶಾಸಕರ ಕ್ಷೇತ್ರಗಳಿಗೂ ನೀಡಲು ಸಾಧ್ಯವಾಗುತ್ತಿಲ್ಲ. ಇದರಿಂದಾಗಿ ಕೆಲವರಲ್ಲಿ ಅಸಮಾಧಾನವಿದೆ. ಸಿಎಂ ಬಿಎಸ್ವೈ ಅವರು ಅದೆಲ್ಲವನ್ನೂ ಬಗೆಹರಿಸಲಿದ್ದಾರೆ. ಸರ್ಕಾರವು ಯಾವುದೇ ತೊಂದರೆ ಇಲ್ಲದೇ ತನ್ನ ಪೂರ್ಣ ಅವಧಿಯನ್ನು ಪೂರ್ಣಗೊಳಿಸಲಿದೆ ಎಂದು ಹೇಳೀದರು.
ಉತ್ತರ ಕರ್ನಾಟಕದ ಶಾಸಕರು ಬೆಂಗಳೂರಿನಲ್ಲಿ ಒಬ್ಬರನ್ನೊಬ್ಬು ಊಟಕ್ಕೆ ಕರೆಯುವುದು ಸಾಮಾನ್ಯವಾಗಿದೆ. ಈಚೆಗೆ ಉಮೇಶ ಕತ್ತಿ ಅವರು ಒಳ್ಳೆಯ ರೊಟ್ಟಿ ಊಟ ಮಾಡಿಸಲು ಕೆಲವರನ್ನು ಕರೆದಿದ್ದರು. ಇದಕ್ಕೆ ಬೇರೆ ಅರ್ಥವನ್ನು ಕಲ್ಪಿಸಬೇಕಿಲ್ಲ ಎಂದರು.