ಕೋಲಾರ, ಜೂ.08 (DaijiworldNews/MB): ಚಿಕಿತ್ಸೆ ಪಡೆಯದೆಯೇ ತಪ್ಪಿಸಿಕೊಂಡಿರುವ ಕೊರೊನಾ ಸೋಂಕಿತನನ್ನು ಪತ್ತೆಹಚ್ಚಲು 10 ಮಂದಿ ಪೊಲೀಸರ ತಂಡ ರಚಿಸಲಾಗಿದೆ.
ಕೋಲಾರ ಜಿಲ್ಲಾಧಿಕಾರಿ ಸತ್ಯಾಭಾಮಾ ಎಸ್ ಪಿ ಕಾರ್ತಿಕ್ ಮತ್ತು ಸುಜೇತಾ ಸಲ್ಮಾನ್ ಸಭೆ ನಡೆಸಿ, ಆತನ ಸಹೋದರಿಯಿಂದ ಫೋಟೋ ಸಂಗ್ರಹಿಸಿದ್ದು ಕೋಲಾರ ಮತ್ತು ಕೆಜಿಎಫ್ ಎಸ್ ಪಿ ಕಾರ್ತಿಕ್ ರೆಡ್ಡಿ ನಿರ್ದೇಶನದಂತೆ ಈ ತಂಡ ರಚಿಸಲಾಗಿದೆ. ಕೊರೊನಾ ಹರಡುವುದನ್ನು ತಡೆಗಟ್ಟುವ ನಿಟ್ಟಿನಲ್ಲಿ ನೆರೆಯ ಆಂಧ್ರ ಪ್ರದೇಶ ಮತ್ತು ತಮಿಳುನಾಡು ಪೊಲೀಸರಿಗೂ ವಿಚಾರ ತಿಳಿಸಲಾಗಿದೆ.
ಮಂಡ್ಯ ಮೂಲದ ಈ ವ್ಯಕ್ತಿ ಕೋಲಾರದ ಹೋಟೆಲ್ನಲ್ಲಿ ಕೆಲಸ ಮಾಡುತ್ತಿದ್ದು ಕೊರೊನಾ ಪರೀಕ್ಷೆ ನಡೆಸಿದಾಗ ಪಾಸಿಟಿವ್ ಬಂದಿತ್ತು. ಆದರೆ ಆತ ಆಸ್ಪತ್ರೆಗೆ ಹೋಗದಿದ್ದಾಗ ಆರೋಗ್ಯಾಧಿಕಾರಿಗಳು ಕರೆ ಮಾಡಿದ್ದು ಆತನ ಮೊಬೈಲ್ ನಂಬರ್ ಸ್ವಿಚ್ ಆಫ್ ಆಗಿತ್ತು. ಎಷ್ಟು ಕರೆ ಮಾಡಿದರೂ ಸ್ವಿಚ್ ಆಫ್ ಆದ ಕಾರಣದಿಂದಾಗಿ ಅವರು ಪೊಲೀಸರಿಗೆ ದೂರು ನೀಡಿದ್ದಾರೆ.
ನಾಪತ್ತೆಯಾಗಿರುವ ರೋಗಿ ಜೂನ್ 2 ರಂದು ಬಂಗಾರಪೇಟೆಲ್ಲಿ ಮತ್ತು ಜೂನ್ 3 ರಂದು ಕೋಲಾರದಲ್ಲಿ ಕಾಣಿಸಿಕೊಂಡಿದ್ದ ಎಂದು ಹೇಳಲಾಗಿದೆ.
ಇನ್ನು ಆತ ಪತ್ತೆಯಾದ ಬಳಿಕ ಆತ ಸಂಚರಿಸಿದ ವಿವರ ಪತ್ತೆ ಹಚ್ಚುವುದೇ ದೊಡ್ಡ ಸವಾಲಾಗಿದೆ ಎಂಬುದು ಅಧಿಕಾರಿಗಳ ಅಭಿಪ್ರಾಯವಾಗಿದೆ.