ನವದೆಹಲಿ, ಜೂ 08 (Daijiworld News/MSP): ಪಾಕಿಸ್ತಾನವೂ 1999 ರಲ್ಲಿ ಕಾರ್ಗಿಲ್ ವಿಚಾರದಲ್ಲಿ ಕ್ಯಾತೆ ತೆಗೆದು ಒಳನುಗ್ಗಿದಂತೆ ಈ ಬಾರಿ ಲಡಾಕ್ ಪ್ರದೇಶದಲ್ಲಿ ಗಡಿ ಕ್ಯಾತೆ ತೆಗೆದಿರುವ ಚೀನಾ ಭಾರತಕ್ಕೆ ಸೇರಿದ 60 ಕಿ.ಮೀ ಪ್ರದೇಶವನ್ನು ಆಕ್ರಮಿಸಿಕೊಂಡಿದೆ.
ಗಾಲ್ವಾನ್ ನದಿ ಮತ್ತು ಪಾಂಗೊಂಗ್ ಸರೋವರ ಪ್ರದೇಶಗಳಳ ಕಣಿವೆ ಪ್ರದೇಶದಲ್ಲಿ ಚೀನಾದ ಪಿಎಲ್ಎ ಸೈನಿಕರು ಆಯಕಟ್ಟಿನ ಧರ್ಬುಕ್--ಷ್ಯೋಕ್- ದೌಲತ್-ಬೇಗ್ ಒಲ್ಡೀ (ಡಿಎಸ್ ಡಿಬಿಓ) ಹೆದ್ದಾರಿಯನ್ನು ಗುರಿಯಾಗಿರಿಸಿಕೊಂಡಿದ್ದು ಸಬ್-ಸೆಕ್ಟರ್ ನಾರ್ತ್ ಜೊತೆಗಿನ ಸೇನಾ ಸಂಪರ್ಕವನ್ನು ಕಡಿತಗೊಳಿಸಲು ಚೀನಾ ಪ್ರಯತ್ನಿಸುತ್ತಿದೆ.
ಡಿಎಸ್ ಡಿಬಿಓ ರಸ್ತೆಯಿಂದ ಕೇವಲ ಒಂದುವರೆ ಕಿ.ಮೀ ದೂರದಲ್ಲಿರುವ ಷ್ಯೋಕ್ ನದಿಯ ಬಳಿ ಚೀನಾ ಸೇನೆ ಸ್ಥಾಪನೆಯಾಗಿದ್ದು, ಭಾರತಕ್ಕೆ ಸೇರಿದ 60 ಚದರ ಕಿಲೋಮೀಟರ್ ನಷ್ಟು ಭೂ ಭಾಗವನ್ನು ಆಕ್ರಮಿಸಿಕೊಂಡಿರುವುದು ಈಗ ಬಹಿರಂಗವಾಗಿದೆ. ಚೀನಾದ ಪಿಎಲ್ಎ ಸೈನಿಕರು ಈ ರಸ್ತೆಯಲ್ಲಿ ಶಾಶ್ವತವಾಗಿ ಪ್ರಾಬಲ್ಯ ಸಾಧಿಸಲು ಉದ್ದೇಶಿಸಿರುವುದು ಈ ಮೂಲಕ ಸ್ಪಷ್ಟವಾಗಿದೆ
ಭಾರತ ಚೀನಾ ಗಡಿ ಮುನಿಸು ಎರಡೂ ದೇಶಗಳು ದ್ವಿಪಕ್ಶ್ಜೀಯ ಒಪ್ಪಂದಗಳ ಮೂಲಕ ಬಗೆಹರಿಸಲು ತೀರ್ಮಾನಿಸಿದೆ ಎಂದು ವಿದೇಶಾಂಗ ಸಚಿವಾಲಯ ಘೋಷಿಸಿದರೂ, ಚೀನಾ ಸೈನಿಕರು ಗಡಿಯೊಳಗೆ ನುಗ್ಗಿ ಬಂಕರ್ಗಳನ್ನು ನಿರ್ಮಿಸುತ್ತಿದ್ದಾರೆ ಹಾಗೂ ಭಾರತೀಯ ಸೇನಾ ಪಡೆ ದಶಕಗಳಿಂದ ನಿಯಮಿತವಾಗಿ ಭೇಟಿ ನೀಡುವ ಭಾರತೀಯ 'ಪೆಟ್ರೋಲಿಂಗ್ ಪಾಯಿಂಟ್'ಗಳಿಗೆ ಚೀನಾದ ಪಡೆಗಳು ಪ್ರವೇಶವನ್ನು ನಿರ್ಬಂಧಿಸಿವೆ ಎಂದು ತಿಳಿದುಬಂದಿದೆ.