ಬೆಂಗಳೂರು, ಜೂ.08 (DaijiworldNews/MB) : ಚಿರಂಜೀವಿ ಸರ್ಜಾ ಅವರಿಗೆ ಯಾವುದೇ ಕೆಟ್ಟ ಅಭ್ಯಾಸ ಇರಲಿಲ್ಲ. ಸುಳ್ಳು ಸುದ್ದಿ ಹಬ್ಬಿಸಬೇಡಿ ಎಂದು ಸರ್ಜಾ ಕುಟುಂಬದ ಆಪ್ತ ಪ್ರಶಾಂತ್ ಸಂಬರ್ಗಿ ಮನವಿ ಮಾಡಿದ್ದಾರೆ.
ಈ ಬಗ್ಗೆ ಮಾಧ್ಯಮದೊಂದಿಗೆ ಮಾತನಾಡಿದ ಅವರು, ಸಾಮಾಜಿಕ ಜಾಲತಾಣದಲ್ಲಿ ಚಿರಂಜೀವಿ ಸರ್ಜಾಗೆ ಕೆಟ್ಟ ಅಭ್ಯಾಸವಿತ್ತು. ಅವರು ಡ್ರಗ್ಸ್ ತೆಗೆದುಕೊಳ್ಳುತ್ತಿದ್ದರು, ನಿದ್ದೆ ಮಾತ್ರೆಗಳನ್ನು ಸೇವಿಸುತ್ತಿದ್ದರು ಎಂದೆಲ್ಲಾ ಸುದ್ದಿಗಳನ್ನು ಹರಡಲಾಗುತ್ತಿದೆ. ಆದರೆ ಇವೆಲ್ಲಾ ಸುಳ್ಳು ಸುದ್ದಿಯಾಗಿದ್ದು ಯಾರೂ ಈ ವದಂತಿಗಳನ್ನು ನಂಬಬೇಡಿ. ಅವರಿಗೆ ಯಾವುದೇ ಕೆಟ್ಟ ಅಭ್ಯಾಸವಿರಲಿಲ್ಲ. ಅವರು ಹೃದಯಾಘಾತದಿಂದ ಮೃತಪಟ್ಟಿದ್ದಾರೆ ಎಂದು ಹೇಳಿದ್ದಾರೆ.
ಈ ಬಗ್ಗೆ ಆಸ್ಪತ್ರೆ ಕೂಡ ವರದಿ ನೀಡಿದ್ದು, ಚಿರಂಜೀವಿ ಸರ್ಜಾ ಅವರನ್ನು ಮಧ್ಯಾಹ್ನ 2.20ಕ್ಕೆ ಆಸ್ಪತ್ರೆಗೆ ಕರೆತರಲಾಗಿದ್ದು ತಕ್ಷಣವೇ ಎಮರ್ಜೆನ್ಸಿ ವಾರ್ಡ್ಗೆ ಶಿಫ್ಟ್ ಮಾಡಿ, ದೇಹದ ಉಷ್ಣಾಂಶ, ನಾಡಿಮಿಡಿತ, ಕಣ್ಣಿನ ತಪಾಸಣೆ ಮಾಡಿದಾಗ ಸ್ಪಂದನೆ ಇರಲಿಲ್ಲ. ಬಳಿಕ ಅತ್ಯಾಧುನಿಕ ತಂತ್ರಜ್ಞಾನ ಉಪಕರಣ ಬಳಸಿ ಎದೆಯೊತ್ತಿ ಉಸಿರು ನೀಡುವ ಸಿಪಿಆರ್ ಚಿಕಿತ್ಸೆ ಆರಂಭಿಸಿ ಮೂರು ಬಾರಿ ಸಿಪಿಆರ್ ಚಿಕಿತ್ಸೆಯಲ್ಲಿ ಯಶಸ್ವಿಯಾದರೂ ಬಳಿಕ ಸ್ಪಂದನೆ ದೊರೆಯಲಿಲ್ಲ. ಹಾಗಾಗಿ, 3.48ಕ್ಕೆ ಚಿರಂಜೀವಿ ಸರ್ಜಾ ನಿಧನರಾಗಿದ್ದಾರೆ ಎಂದು ಘೋಷಿಸಲಾಯಿತು ಎಂದು ತಿಳಿಸಿದೆ.
ಒಟ್ಟು 22 ಚಿತ್ರಗಳಲ್ಲಿ ನಟಿಸಿದ್ದ ಚಿರಂಜೀವಿ ಸರ್ಜಾ ಭಾನುವಾರ ಸಾವನ್ನಪ್ಪಿದ್ದು ಇದೀಗ ಅವರ ಸಹೋದರ ಧ್ರುವಾ ಸರ್ಜಾ ಅವರ ಫಾರ್ಮ್ ಹೌಸ್ ಸಮೀಪ ಅಂತ್ಯ ಸಂಸ್ಕಾರ ನಡೆಯಲಿದೆ.