ತ್ರಿಶೂರ್, ಜೂ.08 (DaijiworldNews/MB) : ಸುಮಾರು 2 ವಾರಗಳ ಕಾಲ ನಾಯಿಯ ಬಾಯಿಗೆ ಟೇಪ್ ಹಾಕಿದ ಪರಿಣಾಮ ನಾಯಿಗೆ ನೀರೂ ಕೂಡಾ ಕುಡಿಯಲಾಗದೆ ನೋವಿನಲ್ಲಿ ಅಳೆದಾಡಿದ ಘಟನೆ ತ್ರಿಶೂರ್ನಲ್ಲಿ ನಡೆದಿದ್ದು ಪೀಪಲ್ ಫಾರ್ ಅನಿಮಲ್ ವೆಲ್ಫೇರ್ ಸರ್ವೀಸಸ್ (ಪಿಎಡಬ್ಲ್ಯುಎಸ್) ನ ತ್ರಿಶೂರ್ ಕಚೇರಿಯು ಒಲ್ಲೂರ್ ಎಂಬ ಪ್ರದೇಶದಲ್ಲಿ ಈ ನಾಯಿಯನ್ನು ರಕ್ಷಿಸಿದೆ.
ಸುಮಾರು 3 ವರ್ಷ ಪ್ರಾಯದ ಈ ನಾಯಿಯನ್ನು ರಕ್ಷಿಸಿದ ಬಳಿಕ ಈ ಕುರಿತು ಮಾಹಿತಿ ನೀಡಿದ ತ್ರಿಶೂರ್ ಪಿಎಡಬ್ಲ್ಯುಎಸ್ನ ಕಾರ್ಯದರ್ಶಿ ರಾಮಚಂದ್ರನ್, ''ನಾವು ನಾಯಿಯ ಬಾಯಿಗೆ ಒಂದು ಎಳೆಯ ಟೇಪ್ ಹಾಕಿರಬಹುದು ಎಂದು ಭಾವಿಸಿದ್ದೆವು. ಆದರೆ ನಾವು ನಾಯಿಯನ್ನು ರಕ್ಷಿಸಿದ ಬಳಿಕ ನೋಡಿದಾಗ ನಾಯಿಯ ಬಾಯಿಗೆ ತುಂಬಾ ಬಿಗಿಯಾಗಿ ಹಲವು ಎಳೆಗಳಾಗಿ ಟೇಪ್ ಹಾಕಲಾಗಿದ್ದು ಆ ಟೇಪ್ ಚರ್ಮವನ್ನು ಕುಗ್ಗಿಸಿದ್ದು ನಾಯಿಯ ಮೂಗಿನ ಮೂಲೆ ಕೂಡಾ ಕಾಣಿಸುತ್ತಿತ್ತು. ನಾವು ಟೇಪ್ ತೆಗೆದ ಕೂಡಲೇ 2 ಲೀಟರ್ ನೀರನ್ನು ಕುಡಿಯಿತು'' ಎಂದು ಹೇಳಿದ್ದಾರೆ.
''ಇದು ಸಾಕು ನಾಯಿ ಎಂಬುವುದಕ್ಕೆ ಯಾವುದೇ ಸಂದೇಹವಿಲ್ಲ. ಯಾಕೆಂದರೆ ಅದರ ಕುತ್ತಿಗೆಯಲ್ಲಿ ಸರಪಳಿ ಇತ್ತು. ನಾಯಿ ನಿರಂತರವಾಗಿ ಬೊಗಳುವ ಕಾರಣ ಈ ರೀತಿ ಮಾಡಿರಬಹುದು'' ಎಂದು ಹೇಳಿದ್ದಾರೆ.
ಇನ್ನು ಕಳೆದ ಕೆಲವು ದಿನಗಳ ಹಿಂದೆ ಪಾಲಕ್ಕಾಡ್ನಲ್ಲಿ ಗರ್ಭಿಣಿ ಆನೆಯೊಂದು ಪಟಾಕಿ ತುಂಬಿದ್ದ ಅನಾನಸ್ ತಿಂದು ಸಾವನ್ನಪ್ಪಿದ್ದು ಆರೋಪಿ ಪಿ ವಿಲ್ಸನ್ ಎಂಬಾತನನ್ನು ಬಂಧಿಸಲಾಗಿದೆ. ಇನ್ನೊಂದೆಡೆ ಪಟಾಕಿ ಸುತ್ತಿದ ಗೋಧಿ ಹಿಟ್ಟಿನ ಉಂಡೆ ತಿಂದು ಗರ್ಭಿಣಿ ಹಸುವಿನ ದವಡೆ ಸ್ಪೋಟಗೊಂಡಿದ್ದು ಚಿಕಿತ್ಸೆ ನೀಡಲಾಗಿದೆ. ಹಾಗೆಯೇ ಆರೋಪಿ ನಂದಲಾಲ್ ಎಂಬಾತನನ್ನು ಬಂಧಿಸಲಾಗಿದೆ.