ತುಮಕೂರು, ಜೂ 08 (Daijiworld News/MSP): ಯುವ ಜನತೆಯಲ್ಲಿ ಟಿಕ್ ಟಾಕ್ ಹುಚ್ಚು ನೆತ್ತಿಗೇರುತ್ತಿದೆ. ಈ ಹುಚ್ಚಾಟಕ್ಕೆ ಬಿದ್ದು ಅದೆಷ್ಟೂ ಯುವ ಜನತೆ ಪ್ರಾಣ ಕಳೆದುಕೊಂಡಿದ್ದಾರೆ, ಇನ್ನೊಂದಿಷ್ಟು ಮಂದಿ ಆಸ್ಪತ್ರೆ ಸೇರಿದ್ದಾರೆ. ಆದರೆ ಇಲ್ಲೊಬ್ಬ ಮೃತ್ಯುವಿನ ಅನುಭವವನ್ನು ಪಡೆಯಬೇಕು ಅದನ್ನು ನಿಮಗೆ (ಟಿಕ್ ಟಾಕ್ ವೀಕ್ಷರಿಗಾಗಿ) ವಿವರಿಸಬೇಕು ಎಂದು ಹೇಳಿಕೊಂಡು ವಿಷ ಸೇವಿಸಿ ದುರಂತ ಅಂತ್ಯವನ್ನು ಕಂಡುಕೊಂಡಿದ್ದಾರೆ.
ಟಿಕ್ ಟಾಕ್ ಹುಚ್ಚಾಟಕ್ಕೆ ಬಲಿಯಾದ ಯುವಕನನ್ನು ತುಮಕೂರು ಕೊರಟಗೆರೆಯ ಧನಂಜಯ್ (26) ಎಂದು ಗುರುತಿಸಲಾಗಿದೆ. 4 ತಿಂಗಳ ಹಿಂದಷ್ಟೇ ದಾಂಪತ್ಯ ಜೀವನ ಪ್ರವೇಶಿಸಿದ್ದ ಧನಂಜಯ್ , ಕ್ಷುಲಕವಾಗಿ ಸಾವನ್ನು ಮೈಮೇಲೆ ಎಳೆದುಕೊಂಡಿದ್ದಾನೆ.
ಸಾವಿನ ಅನುಭವ ಪಡೆಯುವ ಯತ್ನಕ್ಕೆ ಕೈಹಾಕಿ ಕ್ರಿಮಿನಾಶಕ ಸೇವಿಸಿದ್ದ ಈತ ಸಾವನ್ನೇ ತಂದುಕೊಂಡಿದ್ದಾನೆ. ಕ್ರಿಮಿನಾಶಕ ಸೇವನೆಗೂ ಮುಂಚೆ ಟಿಕ್ ಟಾಕ್ ವಿಡಿಯೋದಲ್ಲಿ ಜೀವನದಲ್ಲಿ ಒಂದು ಸಲ ಸಾಯಬೇಕು. ಅದು ಹೇಗಿರುತ್ತದೆ ಎಂಬ ಅನುಭವ ಪಡೆಯಬೇಕು. ನಾನು ಸಾಯುವುದಕ್ಕೆ ಪ್ರಯತ್ನ ಮಾಡುತ್ತಿದ್ದೇನೆ. ಅದನ್ನು ನೀವು ನೋಡಬೇಕು ಎಂದು ಹೇಳಿದ್ದಾನೆ. ಈ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.