ಕಲಬುರಗಿ, ಜೂ. 08 (DaijiworldNews/SM): ಕೊರೊನಾ ವೈರಸ್ ಜಗತ್ತಿನ ನಿದ್ದೆಗೆಡಿಸಿದೆ. ಯಾವುದೇ ಸನ್ನಿವೇಶಗಳು ಸೃಷ್ಟಿಸಿದ ಆತಂಕವನ್ನು ಮಹಾಮಾರಿ ಕೊರೊನಾ ತಂದೊಡ್ಡಿದೆ. ಈ ಹಿನ್ನೆಲೆಯಲ್ಲಿ ಕೊರೊನಾ ಬಗ್ಗೆ ಜಾಗೃತಿ ಮೂಡಿಸಲು ರಾಜ್ಯ ಸರಕಾರ ಕೋವಿಡ್-19 ಕುರಿತು ಒಂದು ಅಧ್ಯಾಯವನ್ನು ಆರಂಭಿಸಲು ಮುಂದಾಗಿದೆ.
ಈ ವಿಷಯವನ್ನು ಖುದ್ದು ಶಿಕ್ಷಣ ಸಚಿವ ಸುರೇಶ್ ಕುಮಾರ್ ಪತ್ರಿಕೆಯೊಂದರಲ್ಲಿ ನೀಡಿದ ಸಂದರ್ಶನವೊಂದರಲ್ಲಿ ಹೇಳಿಕೊಂಡಿದ್ದಾರೆ. ಮಾರಕ ರೋಗಗಳ ಬಗ್ಗೆ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಈ ಅಧ್ಯಾಯವನ್ನು ಆರಂಭಿಸಲು ಸರಕಾರ ಮುಂದಾಗಿದೆ. ಈ ರೋಗದ ಇತಿಹಾಸ, ಸಮಾಜದ ಮೇಲೆ ಈ ರೋಗದ ಪರಿಣಾಮ, ಮಾಸ್ಕ್ ಧರಿಸುವ ಅಗತ್ಯತೆ, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದು, ಕೈ ತೊಳೆಯುವುದು, ಶುಚಿಗೊಳಿಸುವುದು ಇತ್ಯಾದಿಗಳನ್ನು ಈ ಅಧ್ಯಾಯದಲ್ಲಿ ವಿವರಿಸಲಾಗುತ್ತದೆ ಎಂದು ಸಚಿವರು ತಿಳಿಸಿದ್ದಾರೆ.
ಈಗಾಗಲೇ ಪ್ರಸಕ್ತ ಶೈಕ್ಷಣಿಕ ವರ್ಷದ ಪಠ್ಯಪುಸ್ತಕ ಮುದ್ರಣವಾಗಿದೆ. ಆದರೆ, ಈ ವರ್ಷದಿಂದಲೇ ಜಾಗೃತಿ ಮೂಡಿಸಲು ಸರಕಾರ ನಿರ್ಧರಿಸಿದೆ. ಈ ಬಗ್ಗೆ ತಜ್ಞರೊಂದಿಗೆ ಸಮಾಲೋಚನೆ ನಡೆಸಲಿದ್ದೇವೆ ಎಂದು ಸಚಿವರು ತಿಳಿಸಿದ್ದಾರೆ. ಈ ಬಗ್ಗೆ ಕೈಪಿಡಿಗಳನ್ನು ತಯಾರಿಸಿ ವಿತರಿಸಲು ನಿರ್ಧರಿಸಲಾಗಿದೆ ಎಂಬುವುದು ಸಚಿವರು ನೀಡಿರುವ ಮಾಹಿತಿ.