ಬೆಂಗಳೂರು, ಜೂ.09 (DaijiworldNews/MB) : ರಾಜ್ಯದಲ್ಲಿ ಕೊರೊನಾ ನಿಯಂತ್ರಣಕ್ಕೆ ಘೋಷಿಸಲಾಗಿದ್ದ ಲಾಕ್ಡೌನ್ನಿಂದಾಗಿ ಸಂಕಷ್ಟಕ್ಕೊಳಗಾದ ಎಲ್ಲಾ ಕುಟುಂಬಕ್ಕೂ 10 ಸಾವಿರ ರೂ. ನೆರವಾದರೂ ಸರ್ಕಾರ ಘೋಷಿಸಬೇಕಿತ್ತು ಎಂದು ಒತ್ತಾಯಿಸಿದ ಮಾಜಿ ಮುಖ್ಯಮಂತ್ರಿ ಸಿದ್ಧರಾಮಯ್ಯನವರು, ಬಿಜೆಪಿಯವರು ಆತ್ಮನಿರ್ಭರದ ಹೆಸರಲ್ಲಿ ದೇಶದ ಆತ್ಮವನ್ನೇ ಕೊಂದಿದ್ದಾರೆ ಎಂದು ದೂರಿದರು.
ರಾಜ್ಯದಲ್ಲಿ ಕೋವಿಡ್ ನಿಯಂತ್ರಣ, ನಿರ್ವಹಣೆ, ಸಂತ್ರಸ್ತರಿಗೆ ಪರಿಹಾರ ಮತ್ತು ಆರ್ಥಿಕ ಪುನಶ್ಚೇತನ’ ಕುರಿತು ಸಿಪಿಐ (ಎಂ) ಬೆಂಗಳೂರು ಘಟಕ ಸೋಮವಾರ ಆಯೋಜಿಸಿದ್ದ ವಿರೋಧಪಕ್ಷಗಳ ನಾಯಕರ ಆನ್ಲೈನ್ ಸಂವಾದದಲ್ಲಿ ಮಾತನಾಡಿದ ಅವರು, ನಗರಪ್ರದೇಶದಲ್ಲಿ ಕೆಲಸ ಮಾಡುತ್ತಿದ್ದವರ ಪೈಕಿ 13 ಸಾವಿರಕ್ಕೂ ಹೆಚ್ಚು ಕಾರ್ಮಿಕರು ಬಾದಾಮಿ ಕ್ಷೇತ್ರಕ್ಕೆ ವಾಪಾಸ್ ಆಗಿದ್ದಾರೆ. ಇವರಲ್ಲಿ 2 ಸಾವಿರ ಜನರಿಗೆ ಮಾತ್ರ ಉದ್ಯೋಗ ಖಾತ್ರಿಯಡಿ ಉದ್ಯೋಗ ನೀಡಲಾಗಿದೆ. ಬಿಜೆಪಿಯವರು ಆತ್ಮನಿರ್ಭರದ ಹೆಸರಲ್ಲಿ ದೇಶದ ಆತ್ಮವನ್ನೇ ಕೊಂದಿದ್ದಾರೆ ಎಂದು ಆರೋಪಿಸಿದರು.
ಕೊರೊನಾ ಸೋಂಕು ನಿಯಂತ್ರಿಸಲು ಘೋಷಿಸಲಾಗಿದ್ದ 70 ದಿನಗಳ ಲಾಕ್ಡೌನ್ ನಿಷ್ಪ್ರಯೋಜಕ ಎಂದ ಅವರು, ಕೋವಿಡ್ ಪರಿಹಾರ ಕಾರ್ಯಗಳಿಗೆ ಕೇರಳ ಸರ್ಕಾರ ₹20 ಸಾವಿರ ಕೋಟಿ ಘೋಷಿಸಿದೆ. ತೆಲಂಗಾಣ ₹35 ಸಾವಿರ ಕೋಟಿ ಅದಕ್ಕಾಗಿ ಮೀಸಲಿರಿಸಿದೆ. ರಾಜ್ಯ ಸರ್ಕಾರ ₹10 ಸಾವಿರ ಕೋಟಿ ಖರ್ಚು ಮಾಡಿದ್ದರೂ, ಸಂತ್ರಸ್ತರ ಪ್ರತಿ ಕುಟುಂಬಕ್ಕೆ ₹10 ಸಾವಿರ ನೀಡಬಹುದಾಗಿತ್ತು ಎಂದು ಹೇಳಿದ್ದಾರೆ.
ತೆರಿಗೆ ಸಂಗ್ರಹ ಪ್ರಮಾಣ ಇಳಿದಿರುವ ಬಗ್ಗೆ, ವಲಸೆ ಕಾರ್ಮಿಕರ ಸಂಕಷ್ಟದ ಬಗ್ಗೆ ಪತ್ರಿಕೆಯಲ್ಲಿ ಅಂಕಿ–ಅಂಶ ಸಹಿತ ವರದಿಗಳು ಬರುತ್ತಿದ್ದು ಕೇಂದ್ರ ಸರ್ಕಾರದ ದುರಾಡಳಿತವನ್ನು ಜನರು ಈ ವರದಿ ಓದಿಯಾದರೂ ಅರ್ಥ ಮಾಡಿಕೊಳ್ಳಲಿ ಎಂದು ಹೇಳಿದರು.
ಇನ್ನು ಈ ಸಂದರ್ಭದಲ್ಲೇ ಮಾತನಾಡಿದ ಸಿಪಿಐ ರಾಜ್ಯ ಕಾರ್ಯದರ್ಶಿ ಸಾಥಿ ಸುಂದರೇಶ್, ಡಿಸೆಂಬರ್ನಲ್ಲೇ ಬೇರೆ ದೇಶದಲ್ಲಿ ಸೋಂಕು ಹರಡಿದ್ದು ಆದರೆ ಸರ್ಕಾರ ವಿದೇಶದಿಂದ ಬರುವವರನ್ನು ತಡೆಯುವಲ್ಲಿ ಎಚ್ಚೆತ್ತುಕೊಳ್ಳಲಿಲ್ಲ ಎಂದು ದೂರಿದರು.
ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್, ಕೊರೊನಾ ಕ್ರಮಗಳಿಗಾಗಿ ಮಾಡಿರುವ ವೆಚ್ಚ, ಕೋವಿಡ್–19 ಮುಖ್ಯಮಂತ್ರಿ ಪರಿಹಾರ ನಿಧಿಗೆ ಬಂದಿರುವ ಹಣದ ಕುರಿತು ಶ್ವೇತಪತ್ರ ಹೊರಡಿಸಬೇಕು. ಕೊರೊನಾ ನಿಯಂತ್ರಿಸುವಲ್ಲಿ ರಾಜ್ಯ ಕೇಂದ್ರ ವಿಫಲವಾದ ಕುರಿತು ಚರ್ಚಿಸಲು ಕೂಡಲೇ ವಿಶೇಷ ಅಧಿವೇಶನ ಕರೆಯಬೇಕು ಎಂದು ಒತ್ತಾಯಿಸಿದರು.