ಬೆಂಗಳೂರು, ಜೂ.09 (DaijiworldNews/MB) : ಈವರೆಗೆ ಹೊರ ರಾಜ್ಯಗಳಿಂದ ರಾಜ್ಯಕ್ಕೆ ಬರುವವರಿಗೆ 7 ದಿನಗಳ ಸಾಂಸ್ಥಿಕ ಕ್ವಾರಂಟೈನ್ ಕಡ್ಡಾಯವಾಗಿದ್ದು ಇನ್ನು ಮಹಾರಾಷ್ಟ್ರ ಹೊರತುಪಡಿಸಿ ಉಳಿದ ರಾಜ್ಯದಿಂದ ಬರುವವರಿಗೆ ಜ್ವರದ ಲಕ್ಷಣ ಇಲ್ಲದಿದ್ದಲ್ಲಿ 14 ದಿನಗಳ ಮನೆ ಕ್ವಾರಂಟೈನ್ ಮಾತ್ರ ಪೂರೈಸಿದರೆ ಸಾಕು, ಸಾಂಸ್ಥಿಕ ಕ್ವಾರಂಟೈನ್ ಇಲ್ಲ ಎಂದು ಸರ್ಕಾರ ತಿಳಿಸಿದೆ.
ಸೋಮವಾರ ಮುಖ್ಯ ಕಾರ್ಯದರ್ಶಿ ಟಿ.ಎಂ.ವಿಜಯ ಭಾಸ್ಕರ್ ಅವರು ನೂತನ ನಿಯಮಗಳನ್ನು ಪ್ರಕಟಿಸಿದ್ದು ಮಹಾರಾಷ್ಟ್ರದಿಂದ ಬಂದವರು 7 ದಿನಗಳ ಸಾಂಸ್ಥಿಕ ಕ್ವಾರಂಟೈನ್ ಅನ್ನು ಕಡ್ಡಾಯವಾಗಿ ಪೂರೈಸಿ ಬಳಿಕ 7 ದಿನ ಹೋಂ ಕ್ವಾರಂಟೈನ್ಗೆ ಒಳಗಾಗಬೇಕು. ಉಳಿದ ರಾಜ್ಯದಿಂದ ಬರುವವರು ಕಡ್ಡಾಯವಾಗಿ 14 ದಿನ ಹೋಂ ಕ್ವಾರಂಟೈನ್ಗೆ ಒಳಗಾಗಬೇಕು ಎಂದು ತಿಳಿಸಿದ್ದಾರೆ.
ಇನ್ನು ಮಹಾರಾಷ್ಟ್ರ ಹೊರತುಪಡಿಸಿ ಉಳಿದ ರಾಜ್ಯಗಳಿಂದ ಬರುವವರು ಸೇವಾ ಸಿಂಧುವಿನಲ್ಲಿ ನೋಂದಣಿ ಮಾಡಿಕೊಳ್ಳುವುದು ಕಡ್ಡಾಯವಾಗಿದೆ. ಆದರೆ ಅವರನ್ನು ರಾಜ್ಯದ ಚೆಕ್ಪೋಸ್ಟ್ನಲ್ಲಿ ಥರ್ಮಲ್ ಪರೀಕ್ಷೆಗೆ ಒಳಪಡಿಸಲಾಗುತ್ತದೆ. ಜ್ವರದ ಲಕ್ಷಣ ಇಲ್ಲದಿದ್ದಲ್ಲಿ ಸೀಲ್ ಹಾಕಿ ಹೋಂ ಕ್ವಾರಂಟೈನ್ಗೆ ಕಳುಹಿಸಲಾಗುತ್ತದೆ ಎಂದು ಹೇಳಿದ್ದಾರೆ.