ನವದೆಹಲಿ, ಜೂ.09 (DaijiworldNews/MB) : ದೇಶದಲ್ಲಿ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿರುವ ಕಾರಣದಿಂದಾಗಿ ದೇಶದ 10 ರಾಜ್ಯಗಳ 38 ಜಿಲ್ಲೆಗಳ ನಗರಗಳಲ್ಲಿ ಮನೆ ಮನೆಗೆ ತೆರಳಿ ಕೊರೊನಾ ಪರೀಕ್ಷೆ ನಡೆಸುವ ಅಗತ್ಯವಿದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ತಿಳಿಸಿದೆ.
ಕೇಂದ್ರ ಆರೋಗ್ಯ ಸಚಿವಾಲಯ ಕಾರ್ಯದರ್ಶಿ ಪ್ರೀತಿ ಸೂದನ್ ಅವರು ಈ 38 ಮಹಾನಗರಗಳ ಪಾಲಿಕೆಗಳ ಆಯುಕ್ತರು, ಸಂಬಂಧಿಸಿದ ಜಿಲ್ಲಾಧಿಕಾರಿಗಳು, ಜಿಲ್ಲಾ ಆರೋಗ್ಯ ಅಧಿಕಾರಿಗಳ ಜೊತೆ ವಿಡಿಯೋ ಸಂವಾದ ನಡೆಸಿದ ವೇಳೆ ಈ ಸೂಚನೆಗಳನ್ನು ನೀಡಿದ್ದಾರೆ.
ಈಗಾಗಲೇ ಕೇಂದ್ರ ಸರ್ಕಾರವು ಸೋಂಕು ನಿಯಂತ್ರಿಸಲು ಹಾಗೂ ಸೋಂಕಿನಿಂದ ಸಾವನ್ನಪ್ಪುವ ಪ್ರಮಾಣವನ್ನು ಕಡಿಮೆ ಮಾಡಲು ಕರ್ನಾಟಕ ಸೇರಿ 10 ರಾಜ್ಯಗಳ 38 ಜಿಲ್ಲೆಗಳ 378 ಮಹಾನಗರಗಳಲ್ಲಿ ಮನೆ ಮನೆ ಸಮೀಕ್ಷೆ ನಡೆಸಬೇಕು ಎಂದು ತಿಳಿಸಿದೆ.
ಲಾಕ್ಡೌನ್ ತೆರವಾದ ಕಾರಣದಿಂದಾಗಿ ಇನ್ನು ಮುಂದೆ ಜಿಲ್ಲಾವಾರು ಯೋಜನೆ ರೂಪಿಸಿ ಮನೆಮನೆಗೆ ತೆರಳಿ ಆರೋಗ್ಯ ತಪಾಸಣೆ, ಉತ್ತಮ ಪರೀಕ್ಷೆ, ಆಸ್ಪತ್ರೆಗಳಲ್ಲಿ ರೋಗಿಗಳಿಗೆ ಎಲ್ಲಾ ಹಂತದಲ್ಲಿ ಸೂಕ್ತ ಚಿಕಿತ್ಸೆ ನೀಡಬೇಕು. ಅಧಿಕ ಪ್ರಮಾಣದಲ್ಲಿ ಪರೀಕ್ಷೆ ನಡೆಸಿ ಸೋಂಕಿತರು ಪತ್ತೆಯಾದಾಗಲೇ ಯಾವುದೇ ವಿಳಂಬ ಮಾಡಿದೆಯೇ ಅವರನ್ನು ಅಲ್ಲಿಂದ ಆಸ್ಪತ್ರೆಗೆ ಕೂಡಲೇ ದಾಖಲಿಸಬೇಕು. ಇದರಿಂದಾಗಿ ಸೋಂಕು ಹರಡುವುದನ್ನು ಕಡಿಮೆ ಮಾಡಬಹುದು ಎಂದು ಹೇಳಿದೆ.
ಕರ್ನಾಟಕದಲ್ಲಿ ಯಾವ ಯಾವ ನಗರಗಳು ಈ ಯೋಜನೆಗೆ ಒಳಪಡಲಿವೆ ಎಂಬ ಮಾಹಿತಿ ಇನ್ನಷ್ಟೇ ಲಭ್ಯವಾಗಬೇಕಿದೆ.