ಭುವನೇಶ್ವರ, ಜೂ.09 (DaijiworldNews/MB) : ಅನಾರೋಗ್ಯದಿಂದ ಬಳಲುತ್ತಿದ್ದ ಕೇಂದ್ರದ ಮಾಜಿ ಸಚಿವ ಅರ್ಜುನ್ ಚರಣ್ ಸೇಥಿ ಸೋಮವಾರ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ.
79 ವರ್ಷದ ಸೇಥಿ ಅವರನ್ನು ಭಾನುವಾರ ಆಸ್ಪತ್ರೆಗೆ ದಾಖಲಿಸಲಾಗಿತ್ತು.
ಭದ್ರಾಕ್ ಲೋಕಸಭಾ ಕ್ಷೇತ್ರದಿಂದ 8 ಬಾರಿ ಸಂಸದರಾಗಿ ಆಯ್ಕೆಯಾಗಿದ್ದ ಅವರು 2000-2004 ರವರೆಗೆ ಅಟಲ್ ಬಿಹಾರಿ ವಾಜಪೇಯಿ ಅವರ ಎನ್ ಡಿ ಎ ಸರ್ಕಾರದಲ್ಲಿ ಜಲ ಸಂಪನ್ಮೂಲ ಸಚಿವರಾಗಿದ್ದರು.
ಯುವಕರಾಗಿದ್ದಾಗಿನಿಂದಲೂ ಸಾಮಾಜಿಕ ಮತ್ತು ರಾಜಕೀಯ ವಲಯದಲ್ಲಿ ಸಕ್ರಿಯರಾಗಿದ್ದ ಅವರು, ಎರಡು ಬಾರಿ ಒಡಿಶಾ ವಿಧಾನಸಭೆಗೂ ಆಯ್ಕೆಯಾಗಿದ್ದರು.
ಇನ್ನು ಹಿರಿಯ ನಾಯಕನ ನಿಧನಕ್ಕೆ ಒಡಿಶಾ ಸಿಎಂ ನವೀನ್ ಪಟ್ನಾಯಕ್ ಸಂತಾಪ ಸೂಚಿಸಿದ್ದು ಸೇಥಿಯವರು ಮುತ್ಸದ್ದಿ ರಾಜಕಾರಣಿ ಮತ್ತು ಸಮರ್ಥ ಆಡಳಿತಗಾರ ಎಂದು ಹೇಳಿದ್ದಾರೆ.