ನವದೆಹಲಿ, ಜೂ 9 (Daijiworld News/MSP): ಭಾರತ ಮತ್ತು ಚೀನಾ ನಡುವೆ ಲಡಾಕ್ ವಿವಾದಕ್ಕೆ ಸಂಬಂಧಿಸಿದಂತೆ ಉಭಯ ದೇಶಗಳ ನಡುವೆ ಸೇನಾ ಮತ್ತು ರಾಜತಾಂತ್ರಿಕ ಮಟ್ಟದ ಮಾತುಕತೆ ಸಕಾರಾತ್ಮಕವಾಗಿದ್ದು, ಈ ಮಾತುಕತೆಗಳನ್ನು ಮುಂದುವರಿಸಲು ಎರಡೂ ರಾಷ್ಟ್ರಗಳು ಒಪ್ಪಿಕೊಂಡಿವೆ' ಎಂದು ರಕ್ಷಣಾ ಸಚಿವ ರಾಜನಾಥ್ ಸಿಂಗ್ ಹೇಳಿದ್ದಾರೆ.
ಬಿಜೆಪಿ ಮಹಾರಾಷ್ಟ್ರ ಘಟಕದ ಜನಸಂವಾದ್ ವರ್ಚ್ಯುಯಲ್ ಸಭೆಯನ್ನುದ್ದೇಶಿಸಿ ಮಾತನಾಡಿದ ಅವರು, ಭಾರತ-ಚೀನಾ ಗಡಿ ವಿವಾದ ಬಗೆಹರಿಸಲು ನರೇಂದ್ರ ಮೋದಿ ನೇತೃತ್ವದ ಸರ್ಕಾರ ಪ್ರಯತ್ನಿಸುತ್ತಿದೆ. ಸಾಧ್ಯವಾದಷ್ಟು ಬೇಗ ಈ ದೀರ್ಘ ಕಾಲದ ಸಮಸ್ಯೆ ಪರಿಹರಿಸುತ್ತೇವೆ. ಜೂನ್ 6 ರ ಮಾತುಕತೆ ಸಕಾರಾತ್ಮಕವಾಗಿತ್ತು. ಸದ್ಯದ ಬಿಕ್ಕಟ್ಟನ್ನು ಪರಿಹರಿಸುವುದಕ್ಕೆ ಮಾತುಕತೆಗಳನ್ನು ಮುಂದುವರಿಸಲು ಎರಡೂ ದೇಶಗಳು ಒಪ್ಪಿಕೊಂಡಿವೆ ಎಂದು ತಿಳಿಸಿದ್ದಾರೆ.
ಭಾರತ-ಚೀನಾ ಗಡಿಯಲ್ಲಿ ಏನು ನಡೆಯುತ್ತಿದೆ ಎಂಬುದರ ಬಗ್ಗೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಮತ್ತು ಇತರ ನಾಯಕರನ್ನು ತರಾಟೆಗೆ ತೆಗೆದುಕೊಂಡ ಅವರು, ದೇಶದ ರಕ್ಷಣಾ ಸಚಿವರಾಗಿ ಏನೇ ಹೇಳುವುದಿದ್ದರೂ ಅದನ್ನು ಸಂಸತ್ತಿನೊಳಗೆ ಹೇಳುತ್ತೇನೆ. ನಾನು ಜನರನ್ನು ದಿಕ್ಕು ತಪ್ಪಿಸುವುದಿಲ್ಲ ಎಂದು ಹೇಳಿದ್ದಾರೆ.