ಕೋಲ್ಕತ್ತ, ಜೂ.09 (DaijiworldNews/MB) : ಪಶ್ಚಿಮ ಬಂಗಾಳದಲ್ಲಿ ಮಾಸ್ಕ್ನಲ್ಲೂ ರಾಜಕೀಯ ಪ್ರಚಾರ ಆರಂಭವಾಗಿದ್ದು ಟಿಎಂಸಿ ಹಾಗೂ ಬಿಜೆಪಿ ತನ್ನ ಪಕ್ಷದ ಚಿಹ್ನೆಗಳನ್ನು ಮಾಸ್ಕ್ನಲ್ಲಿ ಮುದ್ರಿಸಿದೆ. ಪಶ್ಚಿಮ ಬಂಗಾಳದ ಮುಖ್ಯಮಂತ್ರಿ, ಟಿಎಂಸಿ ಮುಖ್ಯಸ್ಥೆ ಮಮತಾ ಬ್ಯಾನರ್ಜಿ, ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ದಿಲೀಪ್ ಘೋಷ್ ಸೇರಿದಂತೆ ಬಹುತೇಕ ಎಲ್ಲ ಪ್ರಮುಖ ಪಕ್ಷಗಳ ನಾಯಕರು ತಮ್ಮ ಪಕ್ಷದ ಚಿಹ್ನೆ ಇರುವ ಮಾಸ್ಕ್ಗಳನ್ನು ಧರಿಸುತ್ತಿದ್ದಾರೆ.
ಬಿಜೆಪಿಯ ದಿಲೀಪ್ ಘೋಷ್ ಮಾಧ್ಯಮ ಗೋಷ್ಠಿಗಳಲ್ಲಿ ಬಿಜೆಪಿ ಗುರುತು ಕಮಲವನ್ನು ಒಳಗೊಂಡ ಮಾಸ್ಕ್ ಧರಿಸಿದ್ದು, ರಾಜಕೀಯದಲ್ಲಿ ಪ್ರಚಾರ ಮುಖ್ಯ, ಪಕ್ಷದ ಚಿಹ್ನೆ ಇರುವ ಮಾಸ್ಕ್ ಧರಿಸುವುದರಿಂದ ನಮ್ಮ ಪಕ್ಷದ ಪ್ರಚಾರವೂ ಆಗುತ್ತದೆ, ನಮಗೆ ಸುರಕ್ಷತೆಯೂ ಹೌದು. ನಮ್ಮ ಪಕ್ಷದ ಕಾರ್ಯಕರ್ತರು ಸಂಕಷ್ಟದಲ್ಲಿರುವವರಿಗೆ ಸಹಾಯ ಮಾಡುವ ಸಂದರ್ಭದಲ್ಲಿ ಈ ಚಿಹ್ನೆ ಇರುವ ಮಾಸ್ಕ್ ಧರಿಸಿದರೆ ನಮ್ಮ ಪಕ್ಷದಿಂದ ಮಾಡಲಾಗಿದೆ ಎಂದು ತಿಳಿಯುತ್ತದೆ ಎಂದು ಹೇಳಿದ್ದು ಆದರೆ ಇದೇ ಸಂದರ್ಭದಲ್ಲಿ ಆಡಳಿತಾರೂಢ ತೃಣಮೂಲ ಕಾಂಗ್ರೆಸ್ (ಟಿಎಂಸಿ) ಪರಿಹಾರ ಸಾಮಗ್ರಿಗಳ ಮೇಲೆ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರ ಫೋಟೊಗಳನ್ನು ಅಂಟಿಸುತ್ತಿರುವುದಾಗಿ ಆರೋಪ ಮಾಡಿದ್ದಾರೆ.
ಇನ್ನು ಟಿಎಂಪಿ ಮಾಸ್ಕ್ಗಳ ಮೇಲೆ ಕೇವಲ ಪಕ್ಷದ ಚಿಹ್ನೆಯನ್ನಷ್ಟೇ ಅಲ್ಲದೇ 'ಮಾ, ಮಾಟಿ, ಮಾನುಷ್' ಅಂದರೆ (ತಾಯಿ, ಮಣ್ಣು ಹಾಗೂ ಮನುಷ್ಯ) ಎಂಬ (ತಾಯಿ, ಮಣ್ಣ ಹಾಗೂ ಜನ) ಮುದ್ರಿಸಿದ್ದು ಇಂಥಹ ಮಾಸ್ಕ್ಗಳನ್ನು ಮಮತಾ ಬ್ಯಾನರ್ಜಿ ಧರಿಸುವ ಮೂಲಕ ಟ್ರೆಂಡ್ ಹುಟ್ಟಿಸಿದ್ದಾರೆ. ಟಿಎಂಸಿ ಹಿರಿಯ ಮುಖಂಡರು, 'ಜಿತ್ಬೆ ಬಂಗಲಾ' (ಬೆಂಗಾಲ್ ಗೆಲ್ಲುತ್ತದೆ) ಎಂಬ ಘೋಷ ವಾಕ್ಯವಿರುವ ಮಾಸ್ಕ್ ಧರಿಸುತ್ತಿದ್ದಾರೆ.
ಅಷ್ಟೇ ಅಲ್ಲದೇ ಸಿಪಿಐ (ಎಂ) ಕಾರ್ಯಕರ್ತರು ಕೂಡಾ ಸುತ್ತಿಗೆ ಮತ್ತು ಕುಡುಗೋಲ ಚಿಹ್ನೆ ಹೊಂದಿರುವ ಮಾಸ್ಕ್ಗಳನ್ನು ಧರಿಸುವುದು ಶುರು ಮಾಡಿದ್ದಾರೆ.