ಕಲಬುರ್ಗಿ, ಜೂ 9 (Daijiworld News/MSP): ಕಳೆದ ನಾಲ್ಕು ತಿಂಗಳ ಹಿಂದೆ ಶೇ.12.5 ರಷ್ಟು ಸಾರಿಗೆ ದರವನ್ನು ಹೆಚ್ಚಿಸಿದ್ದು, ಪ್ರಸ್ತುತ ದರ ಹೆಚ್ಚಿಸುವ ಯಾವುದೇ ಪ್ರಸ್ತಾವನೆ ಸರ್ಕಾರದ ಮುಂದೆ ಇಲ್ಲ ಎಂದು ಸಾರಿಗೆ ಸಚಿವ ಲಕ್ಷ್ಮಣ ಸವದಿ ಸ್ಪಷ್ಠಪಡಿಸಿದ್ದಾರೆ.
ಕಲಬುರ್ಗಿಯಲ್ಲಿ ಪತ್ರಿಕಾಗೋಷ್ಟಿ ನಡೆಸಿ ಮಾತನಾಡಿದ ಅವರು, ಲಾಕ್ ಡೌನ್ನಿಂದ ರಾಜ್ಯದ ನಾಲ್ಕು ಸಾರಿಗೆ ನಿಗಮಗಳು ಸುಮಾರು 2200 ಕೋಟಿ ರೂ. ನಷ್ಠ ಅನುಭವಿಸಿದೆ. ಇನ್ನೂ 3500 ಕೋಟಿ ರೂ. ನಷ್ಠ ಅನುಭವಿಸುವ ಸಾಧ್ಯತೆಯಿದೆ. ಪ್ರತಿನಿತ್ಯ 1 ಕೋಟಿ ಜನರು ಸಂಚರಿಸುತ್ತಿದ್ದ ಬಸ್ನಲ್ಲಿ ಇದೀಗ ಪ್ರಯಾಣಿಕರ ಸಂಖ್ಯೆ 14 ಲಕ್ಷಕ್ಕೆ ಇಳಿಕೆಯಾಗಿದೆ ಆದರೂ ಸಾರಿಗೆ ದರ ಹೆಚ್ಚಿಸುವ ಯಾವುದೇ ಪ್ರಸ್ತಾವನೆ ಸರ್ಕಾರದ್ ಅಮುಂದೆ ಇಲ್ಲ ಎಂದು ಹೇಳಿದರು.
ಕೊರೋನಾ ಭಯದಿಂದ ಜನರು ಇನ್ನೂ ಹೊರಬಾರದ ಕಾರಣ ಶೇ.86ರಷ್ಟು ಪ್ರಯಾಣಿಕರ ಕೊರತೆಯನ್ನು ಬಸ್ಗಳು ಕಾಣುತ್ತಿವೆ ಎಂದರು.
ಬಸ್ ಸಂಚಾರಕ್ಕೆ ಪ್ರಯಾಣಿಕರ ಆರೋಗ್ಯ ಹಿತದೃಷ್ಟಿಯಿಂದ ಎಲ್ಲಾ ಸುರಕ್ಷತಾ ಕ್ರಮಗಳನ್ನು ಕೈಗೊಳ್ಳಲಾಗಿದೆ. ಮಹಾರಾಷ್ಟ್ರ ಹೊರತುಪಡಿಸಿ ಕೇರಳ, ಆಂಧ್ರ ಪ್ರದೇಶ, ಗೋವಾ, ತಮಿಳನಾಡು ನಡುವೆ ಅಂತರ ರಾಜ್ಯ ಬಸ್ ಸಂಚಾರ ಆರಂಭಿಸಲು ಪರಸ್ಪರ ಒಪ್ಪಂದ ಪ್ರಕ್ರಿಯೆಗಳು ಪ್ರಗತಿಯಲ್ಲಿವೆ ಎಂದರು.
ಕೊರೋನಾ ಸಂಕಷ್ಟದ ಸಮಯದಲ್ಲಿ ಸಂಸ್ಥೆ ಆರ್ಥಿಕವಾಗಿ ನಷ್ಟ ಅನುಭವಿಸಿದ್ದರಿಂದ 1.35 ಲಕ್ಷ ಸಿಬ್ಬಂದಿಗಳ ಏಪ್ರಿಲ್ ಮತ್ತು ಮೇ ಮಾಹೆಯ ವೇತನ ಪಾವತಿಗೆ ರಾಜ್ಯ ಸರ್ಕಾರಕ್ಕೆ ಮನವಿ ಮಾಡಿದ ಪರಿಣಾಮ 652 ಕೊಟಿ ರೂ. ಸಂಸ್ಥೆಗೆ ಬಿಡುಗಡೆ ಮಾಡಲಾಗಿದೆ. ಏಪ್ರಿಲ್ ಮಾಹೆಯ ವೇತನ ಈಗಾಗಲೇ ಸಿಬ್ಬಂದಿಗಳಿಗೆ ಪಾವತಿಸಿದ್ದು, ಮೇ ಮಾಹೆಯ ವೇತನ ಸಹ ಶೀಘ್ರ ಸಿಬ್ಬಂದಿಗಳ ಕೈಸೇರಲಿದೆ ಎಂದರು.
ಸಂಸ್ಥೆ ನಷ್ಠದಲ್ಲಿದೆ ಎಂದು ಯಾವುದೇ ಕಾರಣಕ್ಕೂ ಸಿಬ್ಬಂದಿಗಳ ವೇತನ ಕಡಿತ ಮಾಡುವಾಗಲಿ ಅಥವಾ ಕಡ್ಡಾಯ ರಜೆ ಮೇಲೆ ತೆರಳುವಂತೆ ಸೂಚಿಸದಂತೆ ಅಧಿಕಾರಿಗಳಿಗೆ ನಿರ್ದೇಶನ ನೀಡಿದ್ದೇನೆ. ಸಾರಿಗೆ ಸೇವೆ ಹೆಚ್ಚಳವಾಗುತ್ತಿದ್ದಂತೆ ಸಿಬ್ಬಂದಿಗಳ ಅವಶ್ಯಕತೆ ಇದ್ದಾಗ ಅಧಿಕಾರಿಗಳು ಕರೆ ಕಳುಹಿಸಿದಾಗ ಸಿಬ್ಬಂದಿಗಳು ಕೆಲಸಕ್ಕೆ ಹಾಜರಾಗಬೇಕು ಎಂದರು.