ನವದೆಹಲಿ, ಜೂ.09 (DaijiworldNews/MB) : ವಲಸೆ ವಲಸೆ ಕಾರ್ಮಿಕರಿಗಾಗಿ ರೈಲ್ವೆ ಇಲಾಖೆ ಆರಂಭಿಸಿದ್ದ 'ಶ್ರಮಿಕ್ ಸ್ಪೆಷಲ್' ರೈಲುಗಳನ್ನು 'ಕೊರೊನಾ ಎಕ್ಸ್ಪ್ರೆಸ್' ಎಂದು ಟೀಕಿಸಿದ್ದ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರಿಗೆ ತಿಗುಗೇಟು ನೀಡಿರುವ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು, "ಮಮತಾ ದೀದಿ, ನೀವು ನಾಮಕರಣ ಮಾಡಿದ ಕೊರೊನಾ ಎಕ್ಸ್ಪ್ರೆಸ್ ಹೆಸರು ನಿಮ್ಮ ನಿರ್ಗಮನಕ್ಕೆ ಕಾರಣವಾಗುತ್ತೆ" ಎಂದು ಹೇಳಿದ್ದಾರೆ.
ಬಿಜೆಪಿಯ 'ಜನ ಸಂವಾದ' ವರ್ಚುಯಲ್ ರ್ಯಾಲಿಯಲ್ಲಿ ಪಶ್ಚಿಮ ಬಂಗಾಳದ ಕಾರ್ಯಕರ್ತರೊಂದಿಗೆ ಮಾತನಾಡಿದ ಅವರು, "ಮಮತಾ ದೀದಿ ನೀವು ನಾಮಕರಣ ಮಾಡಿದ ಕೊರೊನಾ ಎಕ್ಸ್ಪ್ರೆಸ್ ಹೆಸರು ನಿಮ್ಮ ನಿರ್ಗಮನಕ್ಕೆ ಕಾರಣವಾಗುತ್ತದೆ. ವಲಸೆ ಕಾರ್ಮಿಕರ ಗಾಯದ ಮೇಲೆ ಉಪ್ಪು ಸುರಿದಿರುವ ನಿಮ್ಮನ್ನು ಅವರು ಎಂದಿಗೂ ಕ್ಷಮಿಸುವುದಿಲ್ಲ" ಎಂದು ಕಿಡಿಕಾರಿದ್ದಾರೆ.
"ಪಶ್ಚಿಮ ಬಂಗಾಳದಲ್ಲಿ ರಾಜಕೀಯ ಹಿಂಸಾಚಾರದ ಸಂಸ್ಕೃತಿಯನ್ನೂ ಮಮತಾ ಬ್ಯಾನರ್ಜಿ ಬೆಳೆಸಿದ್ದು ಅಲ್ಲಿ ಭಯದ ವಾತಾವರಣ ತೊಲಗಿಸುವುದೇ ಬಿಜೆಪಿಯ ಗುರಿ" ಎಂದು ಹೇಳಿದರು
''ವಲಸೆ ಕಾರ್ಮಿಕರಿಗಾಗಿ ರೈಲ್ವೆ ಇಲಾಖೆ ಆರಂಭಿಸಿದ್ದ ಶ್ರಮಿಕ್ ಸ್ಪೆಷಲ್ ರೈಲುಗಳಲ್ಲಿ ಸುರಕ್ಷಿತ ಸಾಮಾಜಿಕ ಅಂತರ ಕಾಯ್ದುಕೊಳ್ಳಲು ಅವಕಾಶವಿಲ್ಲ, ಆಹಾರ ಮತ್ತು ನೀರು ಸರಿಯಾಗಿ ಸಿಗುತ್ತಿಲ್ಲ, ಇವು ಶ್ರಮಿಕ್ ರೈಲುಗಳೋ, ಕೊರೊನಾ ಎಕ್ಸ್ಪ್ರೆಸ್ ರೈಲುಗಳೋ'' ಎಂದು ಮಮತಾ ಬ್ಯಾನರ್ಜಿ ವ್ಯಂಗ್ಯ ಮಾಡಿದರು.