ಚಾಮರಾಗನಗರ, ಜೂ 9 (Daijiworld News/MSP): ಒಂದೇ ಒಂದು ಕೊರೊನಾ ಪ್ರಕರಣ ವರದಿಯಾಗದೇ ಹಸಿರು ವಲಯವಾಗಿದ್ದ ಚಾಮರಾಜನಗರ ಜಿಲ್ಲೆಯಲ್ಲಿ ಮೊದಲ ಕೋವಿಡ್ ವೈರಸ್ ಪ್ರಕರಣ ಪತ್ತೆಯಾಗಿದೆ. ಆದರೆ ಜನತೆ ಆತಂಕಕ್ಕೀಡಾಗುವುದು ಬೇಡ ಚಾಮರಾಜನಗರ ಈಗಲೂ ಗ್ರೀನ್ ಜೋನ್ ಆಗಿಯೇ ಉಳಿದಿದೆ ಎಂದು ಜಿಲ್ಲಾಧಿಕಾರಿ ಡಾ. ಎಂ.ಆರ್. ರವಿ ಸ್ಪಷ್ಟಪಡಿಸಿದ್ದಾರೆ.
ಮಹಾರಾಷ್ಟ್ರದ ಕುಟುಂಬವೊಂದು ಜಿಲ್ಲೆಯ ಪಾಲೊಮೆಡು ಗ್ರಾಮಕ್ಕೆ ಬಂದಿದ್ದಾರೆ. ಆ ಕುಟುಂಬದ ವೈದ್ಯಕೀಯ ವಿದ್ಯಾರ್ಥಿಯೋರ್ವನಿಗೆ ಕೋವಿಡ್19 ಪಾಸಿಟಿವ್ ದೃಢಪಟ್ಟಿದೆ. ಮಹಾರಾಷ್ಟ್ರದಲ್ಲಿ ಸೋಂಕು ಹೆಚ್ಚಿರುವ ಕಾರಣ ಡಯಾಬಿಟಿಸ್ ಇರುವ ತಾಯಿಯನ್ನು ತನ್ನ ಮಾವನ ಬಿಟ್ಟು ಹೋಗಲು ಬಂದಿದ್ದ. ಇವರು ಜಿಲ್ಲೆಗೆ ಬರುವಾಗ ಸರ್ಕಾರದ ನಿಯಮದ ಪ್ರಕಾರ ಸೇವಾ ಸಿಂಧುವಿನಲ್ಲಿ ರಿಜಿಸ್ಟರ್ ಮಾಡಿಕೊಳ್ಳಬೇಕು. ಹಾಗೆ ಮಾಡದೇ ರೈಲಿನಲ್ಲಿ ಬಂದಿದ್ದಾರೆ. ರೈಲ್ವೆಯಿಂದಲೂ ಜಿಲ್ಲೆಗೆ ಮಾಹಿತಿ ನೀಡಿಲ್ಲ. ಶನಿವಾರ ಕೊಳ್ಳೇಗಾಲದ ಫೀವರ್ ಕ್ಲಿನಿಕ್ ನಲ್ಲಿ ಪರೀಕ್ಷಿಸಿ ನಂತರ ಹನೂರಿನ ಮೊರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ ಕ್ವಾರಂಟೈನ್ ನಲ್ಲಿರಿಸಲಾಗಿದೆ.
ಕೋವಿಡ್ ಪರೀಕ್ಷೆಯಲ್ಲಿ ತಾಯಿ ಮತ್ತು ಹಿರಿಯ ಮಗನಿಗೆ ನೆಗೆಟಿವ್ ಫಲಿತಾಂಶ ಬಂದಿದ್ದು, 22 ವರ್ಷದ ಕಿರಿಯ ಪುತ್ರನಿಗೆ ಪಾಸಿಟಿವ್ ದೃಢಪಟ್ಟಿದೆ. ಈತನಿಗೆ ಪ್ರಸ್ತುತ ಚಾಮರಾಜನಗರದ ಕೋವಿಡ್ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಪ್ರೈಮರಿ ಮತ್ತು ಸೆಕಂಡರಿ ಕಾಂಟಾಕ್ಟ್ ನಲ್ಲಿದ್ದವರುನ್ನು ಕ್ವಾರಂಟೈನ್ ಮಾಡಲಾಗಿದೆ. ಇದಲ್ಲದೆ ಆ ಗ್ರಾಮದ ಕೆಲವರಿಗೆ ರ್ಯಾಂಡಮ್ ಟೆಸ್ಟ್ ಗೆ ಸೂಚನೆ ನೀಡಲಾಗಿದೆ.
ಸೋಂಕಿತ ಆತ ಮುಂಬೈ ನಿವಾಸಿಯಾದ್ದರಿಂದ ಜಿಲ್ಲೆಯವನು ಎಂದು ಪರಿಗಣಿಸಲಾಗುವುದಿಲ್ಲ. ಇವರೆಲ್ಲರ ಬಳಿ ಮುಂಬೈಯ ಆಧಾರ್ ಕೂಡ ಇದೆ ರಾಜ್ಯದಲ್ಲಿರುವ ಜಿಲ್ಲಾವಾರು ಕೋವಿಡ್ ಪ್ರಕರಣಗಳ ಪಟ್ಟಿಯಲ್ಲಿ ಇದು ‘ಇತರೆ’ ವರ್ಗಕ್ಕೆ ಸೇರುತ್ತದೆ ಎಂದು ಜಿಲ್ಲಾಧಿಕಾರಿ ಹೇಳಿದ್ದಾರೆ.