ಬೆಂಗಳೂರು, ಜೂ.09 (DaijiworldNews/MB) : ಕರ್ನಾಟಕ ರಾಜ್ಯ ವಿಧಾನ ಪರಿಷತ್ ಚುನಾವಣೆಗೆ ದಿನಾಂಕ ಪ್ರಕಟವಾಗಿದ್ದು ಜೂನ್ 29ಕ್ಕೆ 7 ಸ್ಥಾನಗಳಿಗೆ ಚುನಾವಣೆ ನಡೆಯಲಿದೆ. ಅಂದು ಸಂಜೆಯೇ ಫಲಿತಾಂಶ ಘೋಷಣೆಯಾಗಲಿದೆ.
ವಿಧಾನ ಸಭೆಯಿಂದ ಆಯ್ಕೆಗೊಂಡ ಪರಿಷತ್ ಸದಸ್ಯರಾದ ನಜೀರ್ ಅಹಮ್ಮದ್, ಜಯಮ್ಮ, ಎಂ.ಸಿ. ವೇಣುಗೋಪಾಲ್, ಎನ್.ಎಸ್. ಬೋಸರಾಜು, ಎಚ್.ಎಂ. ರೇವಣ್ಣ, ಟಿ.ಎ. ಸರವಣ ಹಾಗೂ ಡಿ.ಯು. ಮಲ್ಲಿಕಾರ್ಜುನ ಅವರುಗಳ ಅವಧಿ ಜೂನ್ 30 ರಂದು ಮುಕ್ತಾಯವಾಗುತ್ತಿರುವ ಹಿನ್ನಲೆಯಲ್ಲಿ ಆ ಸ್ಥಾನಗಳಿಗೆ ಚುನಾವಣೆ ನಡೆಸಲಾಗುತ್ತಿದೆ.
ಜೂನ್ 11ಕ್ಕೆ ಅಧಿಸೂಚನೆ ಹೊರಬೀಳಲಿದ್ದು ಜೂನ್ 18 ನಾಮಪತ್ರ ಸಲ್ಲಿಕೆಗೆ ಕಡೆ ದಿನಾಂಕವಾಗಲಿದೆ. ಜೂನ್ 19 ನಾಮಪತ್ರಗಳ ಪರಿಶೀಲನೆ ನಡೆದರೆ 22 ನಾಮಪತ್ರ ಹಿಂಪಡೆಯಲು ಕಡೆ ದಿನಾಂಕವಾಗಲಿದೆ.
ಇದಕ್ಕೂ ಮುನ್ನ ಶಿಕ್ಷಕರ ಕ್ಷೇತ್ರ ಮತ್ತು ಪದವೀಧರ ಕ್ಷೇತ್ರಗಳ ಚುನಾವಣೆ ಮುಂದೂಡಿ ಚುನಾವಣಾ ಆಯೋಗ ಆದೇಶ ಹೊರಡಿಸಿತ್ತು.