ಬೆಂಗಳೂರು, ಜೂ.09 (DaijiworldNews/MB) : ನನ್ನೆದೆ ಬಗೆದರೂ ಅಲ್ಲಿ ಮುಖ್ಯಮಂತ್ರಿ ಯಡಿಯೂರಪ್ಪ ಇದ್ದಾರೆ ಎಂದು ಮುಖ್ಯಮಂತ್ರಿ ರಾಜಕೀಯ ಕಾರ್ಯದರ್ಶಿ ರೇಣುಕಾಚಾರ್ಯ ಅವರು ಹೇಳಿದ್ದು ಮಾತ್ರವಲ್ಲದೇ ಬಗೆದು ತೋರಿಸಬೇಕಾ ಎಂದು ಎದೆ ಮುಟ್ಟಿಕೊಂಡಿದ್ದಾರೆ.
ಇಂದು ವಿಧಾನಸೌಧದಲ್ಲಿ ಮಾಧ್ಯಮದೊಂದಿಗೆ ಮಾತನಾಡಿದ ಅವರು, ಕೊರೊನಾ ಲಾಕ್ಡೌನ್ ಇದ್ದ ಸಂದರ್ಭದಲ್ಲಿ ಮೋದಿ ಮತ್ತು ಅಮಿತ್ ಶಾ ಅವರೇ ಯಡಿಯೂರಪ್ಪನವರ ಕೆಲಸವನ್ನು ಒಪ್ಪಿಕೊಂಡಿದ್ದು ನಾವು ಕೂಡಾ ಅವರನ್ನು ಒಪ್ಪಿಕೊಂಡಿದ್ದೇವೆ. ಹಾಗಿರುವಾಗ ನಾಯಕತ್ವ ಬದಲಾವಣೆ ಮಾಡುವ ಪ್ರಶ್ನೆಯೇ ಇಲ್ಲ ಎಂದು ಹೇಳಿದರು.
ಉಮೇಶ್ ಕತ್ತಿಯವರ ಬಂಡಾಯ ಸಭೆ ಕುರಿತಾದ ಪ್ರಶ್ನೆಗೆ ಉತ್ತರಿಸಿದ ಅವರು, ಈಗಾಗಲೇ ನಾವು ಯಾವುದೇ ರಾಜಕೀಯ ಮಾಡಿಲ್ಲ, ಊಟ ಮಾಡಲು ಹೋಗಿದ್ದೆವು ಎಂದು ಉಮೇಶ್ ಕತ್ತಿ ಅವರು ಸಿಎಂ ಯಡಿಯೂರಪ್ಪ ಅವರಿಗೆ ಸ್ಪಷ್ಟವಾಗಿ ಹೇಳಿದ್ದಾರೆ. ಈ ಬಗ್ಗೆ ನಾನಿನ್ನು ಮಾತನಾಡುವುದಿಲ್ಲ. ಯತ್ನಾಳ್ ಅವರು ಏನೋ ಹೇಳಿದರೆ ಯಡಿಯೂರಪ್ಪ ಅವರ ವರ್ಚಸ್ಸು ಕಡಿಮೆಯಾಗಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ರಾಜ್ಯ ಸಭೆಯ ಟಿಕೆಟ್ ವಿಚಾರವಾಗಿ ಮಾತನಾಡಿದ ಅವರು, ಪಕ್ಷವೂ ತಳಮಟ್ಟದಲ್ಲಿ ಕಾರ್ಯ ನಿರ್ವಹಿಸಿದ ಇಬ್ಬರನ್ನು ಆಯ್ಕೆ ಮಾಡಿದ್ದು ಹೈಕಮಾಂಡ್ ನಿರ್ಧಾರವನ್ನು ನಾವು ಒಪ್ಪಿಕೊಳ್ಳಬೇಕು. ಮಾಧ್ಯಮಗಳು ಎಲ್ಲಾವನ್ನೂ ವರ್ಣರಂಜಿತವಾಗಿ ತೋರಿಸುತ್ತಿದ್ದು ನಿಮಗೆ ಬೇಕಾದಂತೆ ಸುದ್ದಿ ಮಾಡಿ ಎಂದು ಹೇಳಿದರು.
ಹಾಗೆಯೇ ಈ ಸಂದರ್ಭದಲ್ಲಿ ಕೋರ್ ಕಮಿಟಿ ಮೀಟಿಂಗ್ನಲ್ಲಿ ಯಾರ ಹೆಸರು ಕಳುಹಿಸಲಾಗಿತ್ತು ಎಂದು ನನಗೆ ತಿಳಿದಿಲ್ಲ ಎಂದು ಕೂಡಾ ಹೇಳಿದರು.