ನವದೆಹಲಿ, ಜೂ.10 (DaijiworldNews/MB) : ದೇಶದ ರಾಜಧಾನಿ ದೆಹಲಿಯಲ್ಲಿ ಕೊರೊನಾ ಸೋಂಕು ಹರಡುವಿಕೆ ಸಮುದಾಯ ಹಂತ ತಲುಪಿದ್ದು, ಕೇಂದ್ರ ಸರ್ಕಾರದ ಘೋಷಣೆಯೊಂದೇ ಬಾಕಿ ಎಂದು ದೆಹಲಿ ಆರೋಗ್ಯ ಸಚಿವ ಸತ್ಯೇಂದರ್ ಜೈನ್ ಅವರು ಮಂಗಳವಾರ ತಿಳಿಸಿದ್ದಾರೆ.
ಮಾಧ್ಯಮದೊಂದಿಗೆ ಮಾತನಾಡಿದ ಅವರು, ದೆಹಲಿಯಲ್ಲಿ ಸೋಂಕು ಸಮುದಾಯ ಹಂತ ತಲುಪಿದ್ದು ಅದನ್ನು ಏಮ್ಸ್ ನಿರ್ದೇಶಕ ಡಾ.ರಂದೀಪ್ ಗುಲೇರಿಯಾ ಅವರೇ ಒಪ್ಪಿಕೊಂಡಿದ್ದಾರೆ. ಇನ್ನು ಘೋಷನೆ ಮಾಡುವುದು ಕೇಂದ್ರಕ್ಕೆ ಬಿಟ್ಟ ವಿಚಾರ ಎಂದು ಹೇಳಿದ್ದು ಈ ಸಂದರ್ಭದಲ್ಲಿ ಸ್ವತಃ ಏಮ್ಸ್ ನಿರ್ದೇಶಕ ರಂದೀಪ್ ಗುಲೇರಿಯಾ ಅವರೇ ಇದನ್ನು ಒಪ್ಪಿಕೊಂಡಿದ್ದಾರೆ.
ಈ ಬಗ್ಗೆ ಮಾತನಾಡಿದ ಏಮ್ಸ್ ನಿರ್ದೇಶಕ ರಂದೀಪ್ ಗುಲೇರಿಯಾ ಅವರು, ಸೋಂಕು ಹರಡುವಿಕೆಯಲ್ಲಿ ನಾಲ್ಕು ಹಂತವಿದ್ದು ಅದರ ಮೂರನೇ ಹಂತವೇ ಸಮುದಾಯ ಹರಡುವಿಕೆ. ದೆಹಲಿಯಲ್ಲಿ ಸೋಂಕು ಸಮುದಾಯ ಹಂತ ತಲುಪಿರುವುದು ನಿಜ. ಆದರೆ ಇನ್ನೂ ಕೂಡಾ ಕೇಂದ್ರ ಸರ್ಕಾರ ಇದನ್ನು ಒಪ್ಪಿಕೊಂಡಿಲ್ಲ. ನಾವಾಗಿ ಇದನ್ನು ಘೋಷಿಸಲು ಸಾಧ್ಯವಿಲ್ಲ. ಇದನ್ನು ಘೋಷಿಸಬೇಕಾದದ್ದು ಕೇಂದ್ರ ಸರ್ಕಾರ ಎಂದು ತಿಳಿಸಿದ್ದಾರೆ.
ನಮಗೆ ಹೇಗೆ ಸೋಂಕು ತಗುಲಿದೆ ಎಂಬುದು ಜನರಿಗೆ ತಿಳಿಯದಿದ್ದಾಗ ಅದನ್ನು ಸಮುದಾಯ ಹಂತ ಎಂದು ಕರೆಯಲಾಗುವುದು. ದೆಹಲಿಯಲ್ಲಿ ದಾಖಲಾಗಿರುವ ಅರ್ಧದಷ್ಟು ಸೋಂಕಿತ ಜನರಿಗೆ ತಮಗೆ ಸೋಂಕು ತಗುಲಿರುವುದು ಹೇಗೆ ಎಂದು ತಿಳಿದೆ ಇಲ್ಲ ಎಂದು ಹೇಳಿದ್ದಾರೆ.