ಬೆಂಗಳೂರು, ಜೂ.10 (DaijiworldNews/MB) : ಬಿಜೆಪಿಯವರು ಎಂತಹಾ ದಮನಕಾರಿ ಪ್ರವೃತ್ತಿ ತೋರಿಸಿದರೂ ನಾವು ಡಿಕೆಶಿ ಪದಗ್ರಹಣ ಮಾಡುತ್ತೇವೆ ಎಂದು ವಿಪಕ್ಷ ನಾಯಕ, ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಹೇಳಿದ್ದಾರೆ.
ಈ ಬಗ್ಗೆ ಸರಣಿ ಟ್ವೀಟ್ ಮಾಡಿರುವ ಅವರು, ಕೆಪಿಸಿಸಿಯ ನೂತನ ಅಧ್ಯಕ್ಷರಾದ ಡಿಕೆ ಶಿವಕುಮಾರ್ ಅವರ ಪದಗ್ರಹಣ ಸಮಾರಂಭಕ್ಕೆ ಮತ್ತೆ ಅನುಮತಿ ನಿರಾಕರಿಸಿರುವ ಸರ್ಕಾರದ ಕ್ರಮವನ್ನು ಖಂಡಿಸುತ್ತೇನೆ. ಇದು ರಾಜಕೀಯ ಪ್ರೇರಿತ ನಿರ್ಧಾರವಾಗಿದ್ದು, ಪ್ರತಿಪಕ್ಷಗಳನ್ನು ಹತ್ತಿಕ್ಕುವ ಪ್ರಯತ್ನವಾಗಿದೆ ಎಂದು ಆರೋಪಿಸಿದ್ದಾರೆ.
ದೇಶದ ಗೃಹ ಸಚಿವರಾದ ಅಮಿತ್ ಶಾ ಅವರು ಬಿಹಾರ ಮತ್ತು ಪಶ್ಚಿಮ ಬಂಗಾಳದಲ್ಲಿ ವರ್ಚುವಲ್ ರ್ಯಾಲಿ ನಡೆಸುವಾಗ ಅನ್ವಯ ಆಗದ ನಿಯಮಗಳು ಕೆಪಿಸಿಸಿ ಅಧ್ಯಕ್ಷರ ಪದಗ್ರಹಣ ಸಮಾರಂಭಕ್ಕೆ ಮಾತ್ರ ಅನ್ವಯ ಆಗುವುದು ಹೇಗೆ? ಎಂದು ಪ್ರಶ್ನಿಸಿದ್ದಾರೆ.
ಸರ್ಕಾರ ಕೂಡಲೇ ಪದಗ್ರಹಣ ಸಮಾರಂಭಕ್ಕೆ ಅನುಮತಿ ನೀಡಬೇಕು. ಬಿಜೆಪಿಯವರು ಎಂತಹಾ ದಮನಕಾರಿ ಪ್ರವೃತ್ತಿ ತೋರಿಸಿದರೂ ನಾವು ಕಾರ್ಯಕ್ರಮ ಮಾಡುತ್ತೇವೆ. ನಾವು ಕಾನೂನು ಗೌರವಿಸುವವರು, ಕಾನೂನಿನ ಅಡಿಯಲ್ಲೇ ಕಾರ್ಯಕ್ರಮ ಮಾಡಲಿದ್ದೇವೆ ಎಂದು ಹೇಳಿದ್ದಾರೆ.