ನವದೆಹಲಿ, ಜೂ.10 (DaijiworldNews/MB) : ದೇಶದಲ್ಲಿ ಕಳೆದ ಒಂದು ದಿನದಲ್ಲೇ 9,985 ಮಂದಿಯಲ್ಲಿ ಕೊರೊನಾ ಸೋಂಕು ದೃಢಪಟ್ಟಿದ್ದು 279 ಮಂದಿ ಸೋಂಕಿನಿಂದಾಗಿ ಸಾವನ್ನಪ್ಪಿದ್ದಾರೆ. ದೇಶದಲ್ಲಿ ಒಟ್ಟು ಕೊರೊನಾ ಸೋಂಕಿತರ ಸಂಖ್ಯೆ 2,76,583ಕ್ಕೆ ಏರಿಕೆಯಾಗಿದ್ದು ಈವರೆಗೆ 7745 ಮಂದಿ ಕೊರೊನಾಗೆ ಬಲಿಯಾಗಿದ್ದಾರೆ.
ದೇಶದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ಅಧಿಕವಾಗುತ್ತಿರುವಂತೆ ಸೋಂಕಿತರು ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗುವ ಪ್ರಮಾಣವೂ ಕೂಡಾ ಅಧಿಕವಾಗುತ್ತಿದ್ದು ಈವರೆಗೆ 1,35,206 ಸೋಂಕಿತರು ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ. ಇನ್ನು 1,33,632 ಮಂದಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ದೇಶದಲ್ಲೇ ಅತೀ ಹೆಚ್ಚು ಕೊರೊನಾ ಪ್ರಕರಣಗಳು ದಾಖಲಾಗಿರುವ ಮಹಾರಾಷ್ಟ್ರದಲ್ಲಿ ಮಂಗಳವಾರ ಒಂದೇ ದಿನದಲ್ಲಿ 2251 ಮಂದಿಯಲ್ಲಿ ಸೋಂಕು ದೃಢಪಟ್ಟಿದ್ದು ರಾಜ್ಯದಲ್ಲಿ ಒಟ್ಟು 90787 ಮಂದಿಗೆ ಸೋಂಕು ತಗುಲಿದ್ದು 3289 ಮಂದಿ ಮೃತಪಟ್ಟಿದ್ದಾರೆ. 42638 ಮಂದಿ ಗುಣಮುಖರಾಗಿದ್ದು 44860 ಸಕ್ರಿಯ ಪ್ರಕರಣಗಳಾಗಿವೆ. ಕರ್ನಾಟಕದಲ್ಲಿ 5921 ಮಂದಿಗೆ ಸೋಂಕು ದೃಢಪಟ್ಟಿದ್ದು 66 ಮಂದಿ ಸಾವನ್ನಪ್ಪಿದ್ದಾರೆ. 3251 ಸಕ್ರಿಯ ಪ್ರಕರಣಗಳಾಗಿದ್ದು 2604 ಮಂದಿ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ.
ತಮಿಳುನಾಡಿನಲ್ಲಿ 34914, ದೆಹಲಿಯಲ್ಲಿ 31309, ಗುಜರಾತ್ನಲ್ಲಿ 21014, ಉತ್ತರ ಪ್ರದೇಶದಲ್ಲಿ 11335, ರಾಜಸ್ತಾನದಲ್ಲಿ 11245, ಮಧ್ಯಪ್ರದೇಶದಲ್ಲಿ 9849, ಪಶ್ಚಿಮ ಬಂಗಾಳದಲ್ಲಿ 8985 ಕೊರೊನಾ ಪ್ರಕರಣ ಪತ್ತೆಯಾಗಿದ್ದು ದೇಶದಲ್ಲೇ ಮೊದಲ ಕೊರೊನಾ ಪ್ರಕರಣ ಪತ್ತೆಯಾದ ಕೇರಳದಲ್ಲಿ 2096 ಪ್ರಕರಣಗಳು ದಾಖಲಾಗಿದೆ.