ನವದೆಹಲಿ, ಜೂ 10 (DaijiworldNews/PY) : ನೇಪಾಳ ಸಂಸತ್ತಿನಲ್ಲಿ, ದೇಶದ ರಾಜಕೀಯ ಭೂಪಟವನ್ನು ಬದಲಾಯಿಸುವ ಲಿಪುಲೇಖ್, ಕಾಲಪಾಣಿ ಹಾಗೂ ಲಿಂಪಿಯಾಧುರ ಪ್ರದೇಶಗಳು ತನಗೆ ಸೇರಿದ್ದು ಎಂದು ತೋರಿಸುವ ಸಾಂವಿಧಾನಿಕ ತಿದ್ದುಪಡಿ ಮಸೂದೆಯ ವಿಚಾರದ ಬಗ್ಗೆ ನಡೆಯುತ್ತಿರುವ ಚರ್ಚೆ ಹಾಗೂ ಬೆಳವಣಿಗೆಗಳತ್ತ ಭಾರತ ಸೂಕ್ಷ್ಮವಾಗ ಗಮನಹರಿಸಿದೆ.
ಮಂಗಳವಾರ ಕಠ್ಮಂಡುವಿನಲ್ಲಿ ವಿದೇಶ ಸುದ್ದಿಸಂಸ್ಥೆಗೆ ಹೇಳಿಕೆ ನೀಡಿರುವ ವಿದೇಶಾಂಗ ಸಚಿವ ಪ್ರದೀಪ್ ಗ್ವಾವಾಲಿ ಅವರು, ಗಡಿವಿವಾದವನ್ನು ಬಗೆಹರಿಸುವ ಮಾತುಕತೆ ನಡೆಸುವ ಬಗ್ಗೆ ಭಾರತ ಯಾವ ರೀತಿಯಾದ ಪ್ರತಿಕ್ರಿಯೆ ನೀಡಲಿದೆ ಎಂದು ನಾವು ನಿರೀಕ್ಷಿಸುತ್ತಿದ್ದೇವೆ. ನಾವು ಭಾರತದೊಂದಿಗೆ ಔಪಚಾರಿಕ ಒಪ್ಪಂದವನ್ನು ಬಯಸುತ್ತಿದ್ದೇವೆ. ಈ 21ನೇ ಶತಮಾನದಲ್ಲಿ ಮತ್ತಷ್ಟು ದ್ವಿಪಕ್ಷೀಯ ಸಂಬಂಧವನ್ನು ವೃದ್ದಿಸಿಕೊಂಡು ವಿಶೇಷವಾದ ಸಹಭಾಗಿತ್ವವನ್ನು ಹೊಂದಬಹುದು ಎಂಬುವುದಾಗಿ ನಾವು ಭಾವಿಸಿದ್ದೇವೆ ಎಂದು ಹೇಳಿದ್ದಾರೆ.
ನೇಪಾಳದ ಈ ರಾಜಕೀಯ ತೀರ್ಮಾನದ ವಿಚಾರದ ಬಗ್ಗೆ ಇಲ್ಲಿಯವರೆಗೆ ಯಾರನ್ನೂ ಸಂಪರ್ಕ ಮಾಡಿಲ್ಲ. ನೇಪಾಳದ ಜೊತೆ ಮಾತುಕತೆ ನಡೆಸಬೇಕಾದರೆ ಸಕಾರಾತ್ಮಕವಾದ ಉತ್ತಮ ವಾತಾವರಣ ನಿರ್ಮಾಣ ಆಗಬೇಕೆಂದು ಈ ಹಿಂದೆ ಭಾರತ ತಿಳಿಸಿತ್ತು ಎಂದು ಮೂಲಗಳು ಹೇಳಿವೆ.
ನೇಪಾಳ ಸಂಸತ್ತಿನ ಉಭಯ ಸದನಗಳಲ್ಲಿ ನೇಪಾಳ ಕಮ್ಯೂನಿಸ್ಟ್ ಪಾರ್ಟಿ ನೇತೃತ್ವದ ಆಡಳಿತರೂಢ ಸರ್ಕಾರ ತಿದ್ದುಪಡಿ ಮಸೂದೆಯನ್ನು ಮಂಡನೆ ಮಾಡಿತ್ತು. ವಿರೋಧ ಪಕ್ಷ ನೇಪಾಳ ಕಾಂಗ್ರೆಸ್ ತಿದ್ದುಪಡಿಯನ್ನು ವಿರೋಧಿಸಿತ್ತು. ಈ ವಿಚಾರದ ಬಗ್ಗೆ ಪ್ರತಿಕ್ರಿಯೆ ನೀಡಲು ಸಂಸತ್ತಿನ ಸದಸ್ಯರಿಗೆ 72 ಗಂಟೆಗಳ ಕಾಲಾವಕಾಶ ನೀಡಲಾಗಿದ್ದು, ಬಳಿಕ ಮಸೂದೆ ಅನುಮೋದನೆ ಆಗುತ್ತದೆ.