ಗುವಾಹಟಿ, ಜೂ 10 (DaijiworldNews/PY) : ನೈಸರ್ಗಿಕ ಅನಿಲ ಬಾವಿಯಲ್ಲಿ ಉಂಟಾಗಿರುವ ಭಾರೀ ಬೆಂಕಿ ನಂದಿಸುವ ಕಾರ್ಯಚರಣೆಯಲ್ಲಿ ತೊಡಗಿದ್ದ ಆಯಿಲ್ ಇಂಡಿಯಾ ಲಿಮಿಟೆಡ್ನ ಇಬ್ಬರು ಅಗ್ನಿಶಾಮಕ ಸಿಬ್ಬಂದಿಗಳು ಮೃತಪಟ್ಟಿರುವ ಘಟನೆ ಅಸ್ಸಾಂನ ಟಿನ್ಸುಕಿಯಾ ಜಿಲ್ಲೆಯ ಬಾಗ್ಜನ್ನಲ್ಲಿ ನಡೆದಿದೆ.
15 ದಿನಗಳಿಂದ ಅಸ್ಸಾಂನ ಟಿನ್ಸುಕಿಯಾ ಜಿಲ್ಲೆಯ ಬಾಗ್ಜನ್ ತೈಲ ಕ್ಷೇತ್ರದ ಅನಿಲ ಬಾವಿಯಲ್ಲಿ ಅನಿಲ ಸೋರಿಕೆಯಾಗುತ್ತಿತ್ತು. ಅಗ್ನಿ ಶಮನ ಕಾರ್ಯದಲ್ಲಿ ತೊಡಗಿದ್ದ ಇಬ್ಬರು ಸಿಬ್ಬಂದಿಗಳು ನಾಪತ್ತೆಯಾಗಿದ್ದು, ಅವರ ಶವವಾಗಿ ಪತ್ತೆಯಾಗಿರುವುದಾಗಿ ಬುಧವಾರ ಅಧಿಕಾರಿಗಳು ತಿಳಿಸಿದ್ದಾರೆ. ಸ್ಥಳದಲ್ಲಿ ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆ ತಂಡಗಳಿವೆ.
ಭಾರತೀಯ ವಾಯು ಪಡೆ ಸೇನೆಯು ರಾಜ್ಯ ಸರ್ಕಾರದ ಮನವಿಯ ಮೇರೆಗೆ ಬೆಂಕಿ ನಂದಿಸುವ ಕಾರ್ಯದಲ್ಲಿ ಕೈಜೋಡಿಸಿವೆ. ಪ್ಯಾರಾಮಿಲಿಟರಿ ಪಡೆಗಳೂ ಪ್ರದೇಶವನ್ನು ಸುತ್ತುವರೆದಿದೆ.
ಸಿಂಗಪುರದ ತಜ್ಞರ ಹಾಗೂ ಸ್ಥಳೀಯ ಎಂಜಿನಿಯರ್ಗಳ ತಂಡವು ಸೋರಿಕೆಯನ್ನು ನಿಯಂತ್ರಣ ಮಾಡುವ ಪ್ರಯತ್ನದಲ್ಲಿ ತೊಡಗಿದ್ದ ಸಂದರ್ಭ ಮಂಗಳವಾರ ಮಧ್ಯಾಹ್ನ ಬೆಂಕಿ ಕಾಣಿಸಿಕೊಂಡಿದೆ.
ಪೂರ್ಣ ಸೋರಿಕೆ ನಿಯಂತ್ರಿಸಲು ಸಿಂಗಾಪುರದ ತಜ್ಞರು ನಾಲ್ಕು ವಾರಗಳು ತೆಗೆದುಕೊಳ್ಳಲಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಈ ಬಗ್ಗೆ ಅಸ್ಸಾಂ ಮುಖ್ಯಮಂತ್ರಿ ಸರ್ವಾನಂದ ಸೋನೊವಾಲ್ ಅವರು ಕೇಂದ್ರದ ಪೆಟ್ರೋಲಿಯಂ ಸಚಿವ ಧರ್ಮೇಂದ್ರ ಪ್ರಧಾನ್ ಅವರೊಂದಿಗೆ ಮಾತುಕತೆ ನಡೆಸಿದ್ದು, ಬೆಂಕಿ ನಿಯಂತ್ರಣ ಮಾಡಲು ಸಾಧ್ಯವಿರುವ ಎಲ್ಲಾ ಕ್ರಮಗಳನ್ನು ಹಾಗೂ ಸ್ಥಳೀಯರ ಸುರಕ್ಷತೆಯ ಬಗ್ಗೆಯೂ ಕ್ರಮ ತೆಗೆದುಕೊಳ್ಳಬೇಕು ಎಂದು ಹೇಳಿದ್ದಾರೆ.
ತೈಲ ಬಾವಿಯ ಸಮೀಪದಲ್ಲಿರುವ ಭತ್ತದ ಗದ್ದೆಗಳು, ಕೊಳಗಳು ಕಲುಷಿತ ಕಲುಷಿತಗೊಂಡಿದ್ದು, ಚಹಾ ತೋಟಗಳಲ್ಲಿ ಕೂಡಾ ಅನಿಲದ ಕಣಗಳೂ ಹರಡಿವೆ ಎಂದು ಬೆಳೆಗಾರರು ದೂರು ನೀಡಿದ್ದಾರೆ. ಮಂಗಳವಾರದಂದು ಘಟನಾ ಸ್ಥಳಕ್ಕೆ 1.5 ಕಿ.ಮೀ. ವ್ಯಾಪ್ತಿಯಲ್ಲಿ ವಾಸ ಮಾಡುವ ಕನಿಷ್ಠ 6000 ಜನರನ್ನು ಸ್ಥಳಾಂತರ ಮಾಡಿ ಪರಿಹಾರ ಶಿಬಿರಗಳಲ್ಲಿ ಇರಿಸಲಾಗಿದೆ ಎಂದು ಸುದ್ದಿ ಸಂಸ್ಥೆಯೊಂದು ವರದಿ ಮಾಡಿದೆ.