ನವದೆಹಲಿ, ಜೂ.10 (DaijiworldNews/MB) : ಲಡಾಖ್ ಭಾಗದಲ್ಲಿ ಚೀನಿಯರು ನಮ್ಮ ಪ್ರದೇಶವನ್ನು ವಶಕ್ಕೆ ಪಡೆದಿರುವಾಗ ಪ್ರಧಾನಿ ನರೇಂದ್ರ ಮೋದಿ ಮೌನವಾಗಿದ್ದು ಕಣ್ಮರೆಯಾಗಿದ್ದಾರೆ ಎಂದು ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ ಟೀಕೆ ಮಾಡಿದ್ದಾರೆ.
ಈ ಬಗ್ಗೆ ಟ್ವೀಟ್ ಮಾಡಿರುವ ಅವರು, "ಚೀನಿಯರು ಲಡಾಖ್ನಲ್ಲಿರುವ ನಮ್ಮ ಪ್ರದೇಶವನ್ನು ವಶ ಪಡೆಸಿಕೊಂಡಿದ್ದಾರೆ. ಆದರೆ ಈ ಸಮಯದಲ್ಲಿ ಪ್ರಧಾನಿ ಸಂಪೂರ್ಣವಾಗಿ ಮೌನವಾಗಿದ್ದಾರೆ ಮತ್ತು ಕಣ್ಮರೆಯಾಗಿದ್ದಾರೆ" ಎಂದು ದೂರಿದ್ದು ಉಭಯ ದೇಶದ ಮಿಲಿಟರಿ ಮಾತುಕತೆ ವೇಳೆ ಚೀನಾ ಗಲ್ವಾನ್ ಕಣಿವೆ ಮತ್ತು ಪಾಂಗಾಂಗ್ ತ್ಸೊದ ಕೆಲ ಭಾಗಗಳನ್ನು ತನಗೆ ಸೇರಿದ್ದು ಎಂದು ಪ್ರತಿಪಾದಿಸಿದೆ ಎಂಬ ವರದಿಯೊಂದನ್ನು ಟ್ಯಾಗ್ ಮಾಡಿದ್ದಾರೆ.
"ಕೈಯಲ್ಲಿ ನೋವು ಇದ್ದಾಗ ಚಿಕಿತ್ಸೆ ಪಡೆಯಬಹುದು. ಆದರೆ ಕೈಗೇ ನೋವು ಬಂದಾಗ ಏನು ಮಾಡಬೇಕು" ಎಂದು ವ್ಯಂಗ್ಯವಾಡಿದ್ದ ರಾಜ್ನಾಥ್ ಸಿಂಗ್ ಅವರ ವಿರುದ್ಧ ಮಂಗಳವಾರ ಹರಿಯಾಯ್ದಿದ್ದ ರಾಹುಲ್ ಅವರು, ''ಕಾಂಗ್ರೆಸ್ ಪಕ್ಷದ ಚಿಹ್ನೆಯ ಕುರಿತು ಕಮೆಂಟ್ ಮಾಡಿರುವ ರಕ್ಷಣಾ ಸಚಿವರು ಚೀನಾದವರು ಭಾರತೀಯ ಭೂಪ್ರದೇಶವನ್ನು ಲಡಾಖ್ನಲ್ಲಿ ಆಕ್ರಮಿಸಿಕೊಂಡಿದ್ದಾರೆಯೇ ಎನ್ನುವುದಕ್ಕೆ ಮೊದಲು ಉತ್ತರಿಸಬಹುದೆ?" ಎಂದು ಪ್ರಶ್ನಿಸಿದ್ದರು.