ಬೆಂಗಳೂರು, ಜೂ.10 (DaijiworldNews/MB) : ಕಾಂಗ್ರೆಸ್ ಹಿರಿಯ ನಾಯಕ, ರಾಜ್ಯಸಭೆ ಚುನಾವಣೆಗೆ ಅಭ್ಯರ್ಥಿಯಾಗಿರುವ ಮಲ್ಲಿಕಾರ್ಜುನ ಖರ್ಗೆ ಹಾಗೂ ಅವರ ಪುತ್ರ, ಶಾಸಕ ಪ್ರಿಯಾಂಕ್ ಖರ್ಗೆ ಅವರಿಗೆ ಜೀವ ಬೆದರಿಕೆ ಹಾಕಲಾಗಿದೆ.
ಈ ಕುರಿತು ಪ್ರಿಯಾಂಕ್ ಖರ್ಗೆ ಅವರು ಪೊಲೀಸ್ ಮಹಾನಿರ್ದೇಶಕ ಪ್ರವೀಣ್ ಸೂದ್ ಅವರಿಗೆ ದೂರು ನೀಡಿದ್ದು ಕರೆ ಬಂದಿರುವ ಮೊಬೈಲ್ ಸಂಖ್ಯೆಯ ಸ್ಕ್ರೀನ್ ಶಾಟ್ ಕೂಡಾ ನೀಡಿದ್ದಾರೆ. ಹಾಗೆಯೇ ಕರೆ ಮಾಡಿದ ವ್ಯಕ್ತಿಯನ್ನು ಪತ್ತೆ ಹಚ್ಚಿ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದ್ದಾರೆ.
ಜೂನ್ 7ರ ಮಧ್ಯರಾತ್ರಿ 1.30 ಗಂಟೆ ಸುಮಾರಿಗೆ ಸದಾಶಿವ ನಗರದಲ್ಲಿರುವ ಮನೆಯ ದೂರವಾಣಿಗೆ ವ್ಯಕ್ತಿಯೋರ್ವ ಕರೆ ಮಾಡಿದ್ದು ತಂದೆ ಕರೆ ಸ್ವೀಕರಿಸಿದ ಕೂಡಲೇ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದು ಅದೇ ದಿನ ರಾತ್ರಿ 12.36ರಿಂದ 12.53ರ ಸುಮಾರಿಗೆ ನನಗೂ ಅಪರಿಚಿತ ಕರೆ ಬಂದಿದ್ದು ನಾನು ಕರೆ ಸ್ವೀಕರಿಸಿರಲಿಲ್ಲ. ರಾತ್ರಿ 1 ಗಂಟೆಗೆ ಪುನಃ ಕರೆ ಬಂದಿದ್ದು ಕರೆ ಸ್ವೀಕರಿಸಿದಾಗ ಅವಾಚ್ಯವಾಗಿ ನಿಂದಿಸಿ ಜೀವಬೆದರಿಕೆ ಹಾಕಿದ್ದಾನೆ ಎಂದು ದೂರಿನಲ್ಲಿ ಪ್ರಿಯಾಂಕ್ ಖರ್ಗೆ ತಿಳಿಸಿದ್ದಾರೆ.