ಪಾಟ್ನಾ, ಜೂ 10 (DaijiworldNews/PY) : ವ್ಯಕ್ತಿಯೋರ್ವ ತಮ್ಮ ಐದು ಕೋಟಿ ಆಸ್ತಿಯನ್ನು ಎರಡು ಆನೆಗಳ ಹೆಸರಿಗೆ ಬರೆದು ಸುದ್ದಿಯಾದ ಘಟನೆ ಪಾಟ್ನಾದಲ್ಲಿ ನಡೆದಿದೆ.
ಬಿಹಾರ್ ಮೂಲದ ಜಾನಿಪುರದ ಎರಾವತ್ (ಏಷಿಯನ್ ಆನೆಗಳ ಪುನರ್ವಸತಿ ಮತ್ತು ವನ್ಯಜೀವಿಗಳ ಟ್ರಸ್ಟ್) ಸಂಸ್ಥೆಯ ಮುಖ್ಯ ವ್ಯವಸ್ಥಾಪಕ ಮುಖ್ಯ ವ್ಯವಸ್ಥಾಪಕ ಅಖ್ತರ್ ಇಮಾಮ್ ಅವರು ಮೋತಿ ಹಾಗೂ ರಾಣಿ ಹೆಸರಿನ ಆನೆಗಳ ಹೆಸರಿಗೆ ಈದು ಕೋಟಿ ರೂ ಮೌಲ್ಯದ ಆಸ್ತಿಯನ್ನು ಬರೆದಿದ್ದಾರೆ. ಕೃಷಿ ಭೂಮಿ, ಐಷಾರಾಮಿ ಕೊಟ್ಟಿಗೆ, ಮನೆ ಬ್ಯಾಂಕ್ ಬ್ಯಾಲೆನ್ಸ್ ಎಲ್ಲಾ ಸೇರಿ ಐದು ಕೋಟಿ ರೂಪಾಯಿ ಮೌಲ್ಯವಾಗಿದೆ.
ಅಖ್ತರ್ ಇಮಾಮ್ ಅವರು ಅಪಾರ ಆಸ್ತಿಗಳ ಒಡೆಯನಾಗಿದ್ದು, ಇವರ ಮೇಲೆ ದರೋಡೆಕೋರರ ಗುಂಪೊಂದು ದಾಳಿ ನಡೆಸಿದ ಸಂದರ್ಭ ದರೋಡೆಕೋರರನ್ನು ಆನೆಗಳು ಓಡಿಸಿ ಮಾಲೀಕನನ್ನು ಕಾಪಾಡಿದ್ದವು. ದರೋಡೆಕೋರರು ಅಖ್ತರ್ ನಿದ್ದೆಯಲ್ಲಿದ್ದ ಸಂದರ್ಭ ದಾಳಿ ನಡೆಸಿದ್ದು, ಅವರನ್ನು ಎಬ್ಬಿಸಿದ್ದ ಆನೆಗಳು ಕಳ್ಳರನ್ನು ಓಡಿಸಿದ್ದವು. ಈ ಪ್ರಾಣಿಗಳು ತನ್ನ ಪ್ರಾಣ ಉಳಿಸಿದ ಕಾರಣ ಸಹಾಯ ಮಾಡುವ ಸಲುವಾಗಿ ಅಖ್ತರ್ ಅವರು ಈ ಕಾರ್ಯವನ್ನು ಮಾಡಿದ್ದಾರೆ. ಅಖ್ತರ್ ಅವರು ಕಳೆದ 12 ವರ್ಷಗಳಿಂದ ಆನೆಗಳ ಸೇವೆ ಮಾಡುತ್ತಿದ್ದಾರೆ.
ಕೌಟುಂಬಿಕ ಕಲಹದ ಕಾರಣದಿಂದ ಅಖ್ತರ್ ಅವರ ಪತ್ನಿ, ಇಬ್ಬರು ಗಂಡು ಮಕ್ಕಳು ಹಾಗೂ ಒಬ್ಬಳು ಮಗಳು 10 ವರ್ಷಗಳ ಹಿಂದೆ ಇವರಿಂದ ದೂರವಾಗಿದ್ದಾರೆ. ಅಲ್ಲದೇ, ತನ್ನ ತಂದೆಗೆ ಇನ್ನೊಬ್ಬಳೊಂದಿಗೆ ಸಂಬಂಧವಿದ ಎಂದು ಸುಳ್ಳು ಹೇಳಿದ್ದ ಅವರ ಮಗ ತಂದೆಯ ವಿರುದ್ದವೇ ಕೇಸ್ ದಾಖಲು ಮಾಡಿ ಜೈಲಿಗೆ ತಳ್ಳಿದ್ದ. ವಿಚಾರಣೆಯ ಬಳಿಕ ಈ ವಿಚಾರ ಸುಳ್ಳು ಎಂದು ತಿಳಿದು ಅಖ್ತರ್ ಅವರನ್ನು ಜೈಲಿನಿಂದ ಬಿಡುಗಡೆ ಮಾಡಲಾಗಿತ್ತು.
ಗಂಡು ಮಕ್ಕಳು ದಾರು ತಪ್ಪುತ್ತಿದ್ದಾರೆ ಎಂದು ಅವರ ಹೆಸರಿಗೆ ಯಾವುದೇ ಆಸ್ತಿಯನ್ನು ಬರೆಯದೇ, ಅರ್ಧ ಆಸ್ತಿಯನ್ನು ತಮ್ಮ ಪತ್ನಿಯ ಹೆಸರಿಗೆ ಬರೆದಿದ್ದಾರೆ. ಆದರೆ, ಐದು ಕೋಟಿ ಆಸ್ತಿಯನ್ನು ಆನೆಗಳ ಹೆಸರಿಗೆ ಬರೆದರೂ ಮತ್ತಷ್ಟು ಬೆದರಿಕೆಗಳು ಬರುತ್ತಿವೆ ಎಂದು ಅಖ್ತರ್ ಅವರು ಹೇಳಿಕೊಂಡಿದ್ದಾರೆ. ಅಲ್ಲದೇ, ಅಖ್ತರ್ ಅವರ ಮಗ ಆನೆಯ ಮೇಲಿನ ಸಿಟ್ಟಿನಿಂದ ಕಳ್ಳಸಾಗಣೆ ಮೂಲಕ ಆನೆಗಳನ್ನು ಮಾರಾಟ ಮಾಡಲು ಮುಂದಾಗಿದ್ದ. ಕಳ್ಳಸಾಗಣೆಯನ್ನು ಅಖ್ತರ್ ಅವರು ಹೇಗೋ ತಡೆದು ಆನೆಗಳನ್ನು ರಕ್ಷಿಸಿದ್ದಾರೆ.
ಈ ಬಗ್ಗೆ ಹೇಳಿರುವ ಅಖ್ತರ್ ಅವರು, ತಮ್ಮ ಬದುಕಿನ ಬಗ್ಗೆ ಯಾವುದೇ ರೀತಿಯಾದ ನಿಶ್ಚಿತತೆ ಇಲ್ಲ. ತಮ್ಮ ಸಾವಿನ ನಂತರ ಈ ಆನೆಗಳನ್ನು ನೋಡಿಕೊಳ್ಳಲು ಹಣವನ್ನು ಉಪಯೋಗ ಮಾಡಿಕೊಳ್ಳುವಂತೆ ಎರಾವತ್ಗೆ ಮನವಿ ಮಾಡಿದ್ದಾರೆ.