ಪುಣೆ, ಜೂ.10 (DaijiworldNews/MB) : ಕೊರೊನಾ ಸೋಂಕು ಹೆಚ್ಚಳವಾಗುತ್ತಿರುವ ಕಾರಣದಿಂದಾಗಿ ಶಾಲಾ ಕಾಲೇಜು ಆರಂಭ ಮಾಡದಿದ್ದರೂ ಮಹಾರಾಷ್ಟ್ರದಲ್ಲಿ ಪರೀಕ್ಷೆಯ ದಿನವನ್ನು ನಿಗದಿ ಮಾಡಲಾಗಿದೆ. ಈ ನಿಟ್ಟಿನಲ್ಲಿ ಆನ್ಲೈನ್ ಪಾಠ ಆರಂಭ ಮಾಡಲಾಗಿದ್ದು ಈ ಸಂದರ್ಭದಲ್ಲಿ ಶಿಕ್ಷಕಿಯೋರ್ವರು ವಿದ್ಯಾರ್ಥಿಗಳಿಗೆ ಆನ್ಲೈನ್ ಪಾಠ ಮಾಡುವ ನಿಟ್ಟಿನಲ್ಲಿ ಮಾಡಿರುವ ಕಸರತ್ತಿನ ವಿಡಿಯೋ ಈಗ ವೈರಲ್ ಆಗಿದೆ.
ಆನ್ಲೈನ್ನಲ್ಲಿ ಪಾಠ ಮಾಡಲು ಅಥವಾ ಪಾಠ ಕೇಳಲು ಎಲ್ಲಾ ವಿದ್ಯಾರ್ಥಿಗಳಲ್ಲಿ ಹಾಗೂ ಶಿಕ್ಷಕರಲ್ಲಿ ಬೇಕಾದ ಸೌಲಭ್ಯಗಳು ಇಲ್ಲದಿರಬಹುದು. ಇದೇ ಸೌಲಭ್ಯದ ಕೊರತೆಯಿಂದಾಗಿ ಪುಣೆಯ ಬಿ. ಮೌಮಿತಾ ಎಂಬ ಶಿಕ್ಷಕಿಯೋರ್ವರು ಏನೆಲ್ಲಾ ಕಸರತ್ತು ಮಾಡಿ ವಿದ್ಯಾರ್ಥಿಗಳಿಗೆ ಆನ್ಲೈನ್ ಪಾಠ ಮಾಡಿದ್ದಾರೆ.
ಶಿಕ್ಷಕಿಯು ಛಾವಣಿಯಿಂದ ಎರಡು ದಾರವನ್ನು ಕೆಳಗೆ ಇಳಿಬಿಟ್ಟು ಅದಕ್ಕೆ ಬಟ್ಟೆಯನ್ನು ನೇತು ಹಾಕುವ ಹ್ಯಾಂಗರ್ ಕಟ್ಟಿದ್ದು ಬೋರ್ಡ್ ಮೇಲೆ ತಾನು ಬರೆಯುವುದು ಸರಿಯಾಗಿ ಕಾಣುವಂತೆ ಆ ಹ್ಯಾಂಗರ್ನ ಮಧ್ಯದಲ್ಲಿ ತಮ್ಮ ಮೊಬೈಲ್ ಫೋನ್ನ್ನು ಕಟ್ಟಿದ್ದಾರೆ. ಇನ್ನು ತಮ್ಮ ಮೊಬೈಲ್ ಅಲುಗಾಡುವುದನ್ನು ತಪ್ಪಿಸುವ ನಿಟ್ಟಿನಲ್ಲಿ ಹ್ಯಾಂಗರ್ನ ಇನ್ನೆರಡು ತುದಿಯನ್ನು ಕುರ್ಚಿಗೆ ಕಟ್ಟಿದ್ದಾರೆ.
ಇನ್ನು ಈ ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಮೌಮಿತಾ ಅವರೇ ಫೊಸ್ಟ್ ಮಾಡಿದ್ದು ಟ್ರೈಪಾಡ್ ಇಲ್ಲದ ಕಾರಣದಿಂದಾಗಿ ಇಷ್ಟೆಲ್ಲಾ ಕಸರತ್ತು ಮಾಡಬೇಕಾಯಿತು ಎಂದು ಹೇಳಿದ್ದಾರೆ. ಈ ವಿಡಿಯೋ 2 ಲಕ್ಷಕ್ಕೂ ಅಧಿಕ ವೀವ್ ಪಡೆದಿದ್ದು ಭಾರೀ ವೈರಲ್ ಆಗಿದೆ.
ತನ್ನ ಶಿಕ್ಷಣ ವೃತ್ತಿಯಲ್ಲಿರುವ ಬದ್ಧತೆಯನ್ನು ಬಿಡದ ಈ ಶಿಕ್ಷಕಿಯ ಸೃಜನಶೀಲತೆಗೆ ನೆಟ್ಟಿಗರು ಮೆಚ್ಚುಗೆ ವ್ಯಕ್ತಪಡಿಸಿದ್ದು ಇದು ಇತರರಿಗೂ ಮಾದರಿ ಎಂದು ಹೇಳಿದ್ದಾರೆ.