ಬೆಂಗಳೂರು, ಜೂ 10 (DaijiworldNews/PY) : ಪದಗ್ರಹಣ ಕಾರ್ಯಕ್ರಮಕ್ಕೆ ಅನುಮತಿ ಕೇಳಿ ಸಿಎಂ ಅವರಿಗೆ ಪುನಃ ಮತ್ರ ಬರೆದು ಅವಕಾಶ ಕೇಳುತ್ತೇನೆ. ಅವರು ಅವಕಾಶ ಕೊಟ್ಟಾಗ ಸ್ವೀಕಾರ ಮಾಡುತ್ತೇನೆ. ಆಷಾಢದಲ್ಲಿಯಾದರೂ ಪ್ರತಿಜ್ಞೆ ತೆಗೆದುಕೊಳ್ಳುತ್ತೇನೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ಹೇಳಿದರು.
ಜೂನ್ 14ರಂದು ಪದಗ್ರಹಣ ಕಾರ್ಯಕ್ರಮ ನಡೆಸಲು ಸರ್ಕಾರ ಅನುಮತಿ ನಿರಾಕರಿಸಿದ ಹಿನ್ನಲೆಯಲ್ಲಿ ಇಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಸದ್ಯ ನಮ್ಮ ಪದಗ್ರಹಣ ಕಾರ್ಯಕ್ರಮಕ್ಕೆ ಸರಕಾರ ಅನುಮತಿ ನಿರಾಕರಿಸಿದರೂ ಯಾವುದೇ ಕಾರಣಕ್ಕೂ ನಮ್ಮ ಕಾರ್ಯಕ್ರಮವನ್ನು ನಿಲ್ಲಿಸುವುದಿಲ್ಲ. ನನಗೂ ಸಾಕಷ್ಟು ನಂಬಿಕೆ ಇದೆ. ಕಾನೂನಿಗೆ ನಾನು ಗೌರವ ಕೊಟ್ಟೇ ಅಧಿಕಾರ ಸ್ವೀಕಾರ ಮಾಡುತ್ತೇನೆ ಎಂದು ತಿಳಿಸಿದರು.
ಯಾವ ರೀತಿಯಾಗಿ ನಾವು ಕಾರ್ಯಕ್ರಮವನ್ನು ಮಾಡುತ್ತಿದ್ದೇವೆ ಎನ್ನುವ ಮಾಹಿತಿಯನ್ನು ಸರ್ಕಾರದ ಗಮನಕ್ಕೆ ತಂದಿದ್ದೆವು. ಕೇವಲ 150 ಮಂದಿಗೆ ಮಾತ್ರ ಅವಕಾಶ ಕೇಳಿದ್ದೆವು. ಬಿಎಸ್ವೈ ಅವರು ನುಡಿದಂತೆ ನಡೆದುಕೊಳ್ಳುತ್ತಾರೆ ಅಂದುಕೊಂಡಿದ್ದೆ ಎಂದರು.
ಅಧ್ಯಕ್ಷ ಸ್ಥಾನವನ್ನು ಸಾಂಪ್ರದಾಯಿಕವಾಗಿ ಸ್ವೀಕರಿಸುವ ಕಾರ್ಯಕ್ರಮಕ್ಕೆ ಪಕ್ಷದ ಹಿರಿಯರಿಂದ ಆಶೀರ್ವಾದ ಪಡೆದುಕೊಂಡು. ಹಿಂದಿನ ಅಧ್ಯಕ್ಷರುಗಳಿಗೆ ಗೌರವ ಸಮರ್ಪಿಸುವ ಕಾರ್ಯಕ್ರಮವನ್ನು ಆಯೋಜಿಸಿದ್ದೆವು. ಈ ಕಾರ್ಯಕ್ರಮವನ್ನು ಮೂರು ಬಾರಿ ಆಯೋಜನೆ ಮಾಡಿದ್ದೆವು. ಸ್ವತಃ ಮುಖ್ಯಮಂತ್ರಿ ಅವರನ್ನು ಭೇಟಿ ಮಾಡಿದ್ದೆ. ಅಲ್ಲದೇ, ಮುಖ್ಯ ಕಾರ್ಯದರ್ಶಿಗಳಿಗೂ ಮನವಿ ಮಾಡಿದ್ದೆ. ದೇಶದ ಯಾವುದೇ ರಾಜ್ಯದಲ್ಲೂ ಭಾನುವಾರ ಕರ್ಫ್ಯೂ ಇಲ್ಲದಿದ್ದರೂ ರಾಜ್ಯದಲ್ಲಿ ಭಾನುವಾರ ಕರ್ಫ್ಯೂ ಜಾರಿ ಮಾಡಿದ್ದರು. ಕಾರ್ಯಕರ್ತರು ಸುಮಾರು 10,500 ಕಡೆಗಳಲ್ಲಿ ಕಾರ್ಯಕ್ರಮ ಹಮ್ಮಿಕೊಳ್ಳಲು ಸಿದ್ದತೆ ಮಾಡಿಕೊಂಡಿದ್ದರು. ಒಂದುವರೆ ತಿಂಗಳಿನಿಂದ ಈ ಕಾರ್ಯಕ್ರಮವನ್ನು ಆಯೋಜಿಸುವ ಬಗ್ಗೆ ಸಿದ್ದತೆ ಮಾಡಿಕೊಳ್ಳಲಾಗುತ್ತಿದೆ. ಆದರೆ, ರಾಜ್ಯ ಸರ್ಕಾರ ಕೊರೊನಾ ನಿರ್ದೇಶನ ನೆಪವನ್ನು ಹೇಳಿ ಅಧಿಕಾರಿಗಳ ಮೂಲಕ ಆದೇಶವನ್ನು ಕಳುಹಿಸಿದ್ದಾರೆ ಎಂದು ತಿಳಿಸಿದರು.
ರಾಜ್ಯ ಸರ್ಕಾರದ ಎಷ್ಟೋ ಮಂದಿ ಸಚಿವರು ಕಾರ್ಯಕ್ರಮವನ್ನು ಆಯೋಜನೆ ಮಾಡಿ, ಸಾಮಾಜಿಕ ಅಂತರವನ್ನು ಕಾಯ್ದುಕೊಳ್ಳದೇ ಜನರನ್ನು ಸೇರಿಸಿದವರ ವಿರುದ್ದ ಸರ್ಕಾರ ಯಾವ ರೀತಿಯಾದ ಕ್ರಮ ತೆಗೆದುಕೊಂಡಿದೆ. ಪದಗ್ರಹಣ ಕಾರ್ಯಕ್ರಮಕ್ಕೆ ಅನುಮತಿ ನಿರಾಕರಣೆ ಮಾಡಿರುವುದು ಪ್ರಜಾಪ್ರಭುತ್ವದಲ್ಲಿ ಕರಾಳ ದಿನ ಎಂದು ಹೇಳಿದರು.
ಬಿಹಾರ್, ಪಶ್ಚಿಮ ಬಂಗಾಳ, ಒಡಿಸ್ಸಾದಲ್ಲಿ ಬಿಜೆಪಿ ರಾಷ್ಟ್ರೀಯ ನಾಯಕರು, ಕೇಂದ್ರ ಗೃಹ ಸಚಿವರು ಪಾಲ್ಗೊಂಡಿದ್ದರು. 70 ಸಾವಿರ ಎಲ್.ಇ.ಡಿ ಬಳಕೆ ಮಾಡಲಾಗಿತ್ತು ಎಂದು ವರದಿಯಾಗಿದೆ. ಹಾಗಾದರೆ, ನಮಗೊಂದು ಕಾನೂನು, ಅವರಿಗೊಂದು ಕಾನೂನಾ ಎಂದು ಕೇಳಿದರು.