ಗುವಾಹಟಿ, ಜೂ 10 (DaijiworldNews/PY) : ಅಸ್ಸಾಂನ ಟಿನ್ಸುಕಿಯಾ ಜಿಲ್ಲೆಯಲ್ಲಿ ಆಯಿಲ್ ಇಂಡಿಯಾ ಲಿಮಿಟೆಡ್ನ ಅನಿಲ ಬಾವಿಯಲ್ಲಿ ಸೋರಿಕೆಯಿಂದ ಉಂಟಾಗಿರು ಭಾರಿ ಬೆಂಕಿ ಅವಘಡದ ಸಂತ್ರಸ್ತರಿಗೆ ಎಲ್ಲಾ ರೀತಿಯಾದ ನೆರವು ಕಲ್ಪಿಸುವುದಾಗಿ ಪ್ರಧಾನಿ ನರೇಂದ್ರ ಮೋದಿ ಅವರು ಬುಧವಾರ ಭರವಸೆ ನೀಡಿದ್ದಾರೆ.
ಅನಿಲ ಬಾವಿಯಲ್ಲಿ ಸ್ಪೋಟ ಸಂಭವಿಸಿದ್ದು ಹಾಗೂ ಬೆಂಕಿಯಿಂದ ಉಂಟಾಗಿರುವ ಪರಿಸ್ಥಿತಿಯನ್ನು ಅಸ್ಸಾಂ ಮುಖ್ಯಮಂತ್ರಿ ಸರ್ವಾನಂದ ಸೋನೊವಾಲ್ ಅವರು ಪ್ರಧಾನಿ ಮೋದಿ ಅವರಿಗೆ ದೂರವಾಣು ಕರೆ ಮಾಡಿ ವಿವರಿಸಿದ್ದು, ಕೇಂದ್ರದ ನೆರವು ಕೋರಿದ್ದರು. ಸಕಾರಾತ್ಮಕವಾಗಿ ಮೋದಿ ಅವರು ಸ್ಪಂದಿಸಿದ್ದಾರೆ ಎಂದು ಮುಖ್ಯಮಂತ್ರಿ ಕಚೇರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಕಳೆದ 15 ದಿನಗಳಿಂದ ಅನಿಯಂತ್ರಿತವಾಗಿ ಅನಿಲ ಸೋರಿಕೆ ಆಗುತ್ತಿದೆ. ಇದರಿಂದ ಭಾರಿ ಬೆಂಕಿ ಅವಘಡ ಸಂಭವಿಸಿದ್ದು, ಘಟನಾ ಸ್ಥಳದ 1 ಕಿ.ಮೀ ವ್ಯಾಪ್ತಿಯಲ್ಲಿರುವ ಮನೆಗಳು. ವಾಹನಗಳು, ಸಣ್ಣ ಉದ್ಯಾನಗಳು, ಅರಣ್ಯ ಪ್ರದೇಶವು ಸುಟ್ಟು ಬೂದಿಯಾಗಿದೆ. ಇಲ್ಲಿಯವರೆಗೂ ಬೆಂಕಿ ನಿಯಂತ್ರಣಕ್ಕೆ ಬಾರದ ಕಾರಣ, ಹಾನಿಯ ಅಂದಾಜು ಮಾಡಲು ಸಾಧ್ಯವಾಗಿಲ್ಲ ಎಂದು ಒಐಎಲ್ ಅಧಿಕಾರಿಗಳು ತಿಳಿಸಿದ್ದಾರೆ.
ಅನಿಲ ಬಾವಿಯಲ್ಲಿ ಬೆಂಕಿ ಕಾಣಿಸಿಕೊಂಡ ಕೆಲ ಹೊತ್ತಿನಲ್ಲಿಯೇ ಬಾಗ್ಜನ್ ಹಾಗೂ ಸುತ್ತಮುತ್ತಲಿನಲ್ಲಿರುವ ಒಐಎಲ್ ಸಿಬ್ಬಂದಿ ಮೇಲೆ ಸ್ತಳೀಯರು ದಾಳಿ ನಡೆಸಿದ್ದಾರೆ. ಅನೇಕರಿಗೆ ಇದರಿಂದಾಗಿ ಗಾಯಗಳಾಗಿದೆ. ನಮ್ಮ ವಾಹನಗಳು ಹಾನಿಗೊಳಗಾಗಿವೆ ಎಂದು ಅಧಿಕಾರಿಗಳು ಹೇಳಿದ್ದಾರೆ.
ಭಾರತೀಯ ವಾಯು ಪಡೆ ಸೇನೆಯು ರಾಜ್ಯ ಸರ್ಕಾರದ ಮನವಿಯ ಮೇರೆಗೆ ಬೆಂಕಿ ನಂದಿಸುವ ಕಾರ್ಯದಲ್ಲಿ ಕೈಜೋಡಿಸಿವೆ. ಪ್ಯಾರಾಮಿಲಿಟರಿ ಪಡೆಗಳೂ ಪ್ರದೇಶವನ್ನು ಸುತ್ತುವರೆದಿದೆ.