ಬೆಂಗಳೂರು, ಜೂ.11 (DaijiworldNews/MB) : ಕೊರೊನಾ ನಿಯಂತ್ರಣದ ವಿಷಯದಲ್ಲಿ ಮುಖ್ಯಮಂತ್ರಿ ಯಡಿಯೂರಪ್ಪನವರು ದಿನಕ್ಕೊಂದು ನಿರ್ಧಾರ ಕೈಗೊಳ್ಳುತ್ತಿದೆ ಎಂದು ವಿಪಕ್ಷ ನಾಯಕ, ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಟೀಕೆ ಮಾಡಿದ್ದಾರೆ.
ಈ ಕುರಿತು ಸರಣಿ ಟ್ವೀಟ್ ಮಾಡಿರುವ ಅವರು, ಕೋವಿಡ್-19 ನಿಯಂತ್ರಣದ ವಿಷಯದಲ್ಲಿ ಕರ್ನಾಟಕ ರಾಜ್ಯದ ಮುಖ್ಯಮಂತ್ರಿ ಯಡಿಯೂರಪ್ಪ ಕೈಗೊಳ್ಳುತ್ತಿರುವ ದಿನಕ್ಕೊಂದು ನಿರ್ಧಾರ ಅಪಾಯಕಾರಿಯಾದುದು. ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿರುವಾಗ ನಿಯಂತ್ರಣ ಕ್ರಮಗಳನ್ನು ಇನ್ನಷ್ಟು ಬಿಗಿಗೊಳಿಸಬೇಕಾಗಿರುವ ರಾಜ್ಯ ಸರ್ಕಾರ ಪ್ರತಿದಿನ ಸಡಿಲಿಸಿ ಜವಾಬ್ದಾರಿಯಿಂದ ಜಾರಿಕೊಳ್ಳುತ್ತಿದೆ ಎಂದು ದೂರಿದ್ದಾರೆ.
ಹೊರರಾಜ್ಯಗಳಿಂದ ಬಂದವರಿಗೆ 14 ದಿನದ ಸಾಂಸ್ಥಿಕ ಕ್ವಾರಂಟೈನ್ ಬದಲಿಗೆ ಹೋಮ್ ಕ್ವಾರಂಟೈನ್ ಮಾತ್ರ ಕಡ್ಡಾಯಗೊಳಿಸಿರುವುದು ಅತ್ಯಂತ ಬೇಜವಾಬ್ದಾರಿ ಕ್ರಮ. ಹೋಮ್ ಕ್ವಾರಂಟೈನ್ ಅವಧಿಯಲ್ಲಿ ಮೇಲ್ವಿಚಾರಣೆ ಮಾಡುವ ವ್ಯವಸ್ಥೆಯೇ ಇಲ್ಲದಿರುವಾಗ ಸೋಂಕು ತಗಲಿಸಿಕೊಂಡವರು ಇನ್ನಷ್ಟು ಜನರಿಗೆ ಸೋಂಕು ಹರಡುವ ಸಾಧ್ಯತೆ ಇಲ್ಲವೇ? ಎಂದು ಪ್ರಶ್ನಿಸಿದ್ದಾರೆ.
ಸಾಂಸ್ಥಿಕ ಕ್ವಾರಂಟೈನ್ನ ಪ್ರಾರಂಭದಲ್ಲಿ ಮತ್ತು ಕೊನೆಯಲ್ಲಿ ಎರಡು ಬಾರಿ ಕೋವಿಡ್ ಪರೀಕ್ಷೆಗೊಳಪಡಿಸುತ್ತಿದ್ದ ನಿಯಮವನ್ನು ಬದಲಾಯಿಸಿ ಕ್ವಾರಂಟೈನ್ ಅವಧಿಯಲ್ಲಿ ರೋಗ ಲಕ್ಷಣಗಳು ಕಂಡುಬಂದರೆ ಮಾತ್ರ ಪರೀಕ್ಷೆಗೊಳಪಡಿಸಲು ನಿರ್ಧರಿಸಿರುವುದು ಅತ್ಯಂತ ಅಪಾಯಕಾರಿ ಕ್ರಮ ಎಂದು ಆತಂಕ ವ್ಯಕ್ತಪಡಿಸಿದ್ದಾರೆ.
ಕೊರೊನಾ ಸೋಂಕಿತರಲ್ಲಿ 90% ಮಂದಿಯಲ್ಲಿ ರೋಗಲಕ್ಷಣಗಳೇ ಕಂಡು ಬಂದಿಲ್ಲ ಎಂದು ಆರೋಗ್ಯ ಇಲಾಖೆಯೇ ಒಪ್ಪಿಕೊಂಡಿರುವಾಗ, ಕ್ವಾರಂಟೈನ್ ಅವಧಿಯಲ್ಲಿ ರೋಗಲಕ್ಷಣ ಕಂಡುಬಂದರೆ ಮಾತ್ರ ಪರೀಕ್ಷೆಗೊಳಪಡಿಸುವ ರಾಜ್ಯ ಸರ್ಕಾರದ ನಿರ್ಧಾರ ಅಪಾಯಕಾರಿ ಆಗಬಹುದು ಎಂದು ಹೇಳಿದ್ದಾರೆ.