ನವದೆಹಲಿ, ಜೂ.11 (DaijiworldNews/MB) : ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ಏರಿಕೆಯಾಗುತ್ತಿರುವ ಹಿನ್ನಲೆಯಲ್ಲಿ ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಅವರು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರನ್ನು ಭೇಟಿ ಮಾಡಿದ್ದಾರೆ.
ಈ ಕುರಿತು ಟ್ವೀಟ್ ಮಾಡಿರುವ ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಅವರು, ಮಾನ್ಯ ಗೃಹ ಸಚಿವ ಅಮಿತ್ ಶಾ ಅವರನ್ನು ಭೇಟಿಯಾದೆ. ದೆಹಲಿಯ ಕೊರೊನಾದ ಪರಿಸ್ಥಿತಿಯನ್ನು ವಿವರವಾಗಿ ಚರ್ಚಿಸಿದೆವು. ಎಲ್ಲಾ ರೀತಿಯಲ್ಲಿ ಸಹಕಾರ ನೀಡುವ ಭರವಸೆ ನೀಡಿದರು ಎಂದು ತಿಳಿಸಿದ್ದಾರೆ.
ಬುಧವಾರವಷ್ಟೇ ಕೇಜ್ರಿವಾಲ್ ಅವರು, ಜುಲೈ.31ರೊಳಗೆ ದೆಹಲಿಗೆ 1.5 ಲಕ್ಷ ಹಾಸಿಗೆಗಳು ಬೇಕಾಗಬಹುದು. ಇತರೆ ರಾಜ್ಯ ಹಾಗೂ ದೇಶಗಳಿಂದ ದೆಹಲಿಗೆ ಬಂದಿಳಿಯುತ್ತಾರೆ. ಇದರಿಂದಾಗಿ ಸೋಂಕಿತರ ಸಂಖ್ಯೆ ಅಧಿಕವಾಗುತ್ತದೆ ಎಂದು ಹೇಳಿದ್ದರು.
ಈಗಾಗಲೇ ದೆಹಲಿಯಲ್ಲಿ ಕೊರೊನಾ ಸೋಂಕು ಸಮುದಾಯ ಹಂತ ತಲುಪಿದ್ದು ಕೇಂದ್ರ ಸರ್ಕಾರದ ಘೋಷಣೆಯೊಂದೇ ಬಾಕಿ ಎಂದು ದೆಹಲಿ ಆರೋಗ್ಯ ಸಚಿವ ಸತ್ಯೇಂದರ್ ಜೈನ್ ಅವರು ಮಂಗಳವಾರ ತಿಳಿಸಿದ್ದರು.
ಹಾಗೆಯೇ ಈ ಬಗ್ಗೆ ಮಾತನಾಡಿದ ಏಮ್ಸ್ ನಿರ್ದೇಶಕ ರಂದೀಪ್ ಗುಲೇರಿಯಾ ಅವರು, ದೆಹಲಿಯಲ್ಲಿ ಸೋಂಕು ಸಮುದಾಯ ಹಂತ ತಲುಪಿರುವುದು ನಿಜ. ಆದರೆ ಇನ್ನೂ ಕೂಡಾ ಕೇಂದ್ರ ಸರ್ಕಾರ ಇದನ್ನು ಒಪ್ಪಿಕೊಂಡಿಲ್ಲ. ನಾವಾಗಿ ಇದನ್ನು ಘೋಷಿಸಲು ಸಾಧ್ಯವಿಲ್ಲ ಎಂದು ಹೇಳಿದ್ದರು.