ಜೈಪುರ, ಜೂ.11 (DaijiworldNews/MB) : ಬಿಜೆಪಿಯು ರಾಜಸ್ಥಾನದ ಕಾಂಗ್ರೆಸ್ ಸರ್ಕಾರವನ್ನು ಅಸ್ಥಿರ ಮಾಡಲು ಯತ್ನಿಸುತ್ತಿದ್ದು ಶಾಸಕರಿಗೆ 25 ಕೋಟಿ ಆಮಿಷವೊಡ್ಡುತ್ತಿದೆ ಎಂದು ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ದೂರಿದ್ದಾರೆ.
ರಾಜ್ಯಸಭೆ ಚುನಾವಣೆ ಹಿನ್ನೆಲೆಯಲ್ಲಿ ಕಾಂಗ್ರೆಸ್ ತಮ್ಮ ಶಾಸಕರನ್ನು ಜೈಪುರದ ರೆಸಾರ್ಟ್ವೊಂದಕ್ಕೆ ಕರೆಸಿಕೊಂಡು ಸಭೆ ನಡೆಸಿದ್ದು ಬಳಿಕ ಮಾತನಾಡಿದ ಮುಖ್ಯಮಂತ್ರಿ ಗೆಹ್ಲೋಟ್ ಅವರು, ಬಿಜೆಪಿಯು ಕಾಂಗ್ರೆಸ್ ಶಾಸಕರಿಗೆ 25 ಕೋಟಿಗಳ ಆಮಿಷವೊಡ್ಡಿದ್ದು ಅದರಲ್ಲೂ 10 ಕೋಟಿಯನ್ನು ಮುಂಗಡವಾಗಿ ನೀಡುತ್ತೇವೆ ಎಂದೂ ಕೂಡಾ ಹೇಳಿದ್ದಾರೆ. ಜೈಪುರಕ್ಕೆ ಭಾರೀ ಮೊತ್ತದ ಹಣವನ್ನು ರವಾನೆ ಮಾಡಲಾಗಿದೆ ಎಂದು ಅವರು ಆರೋಪಿಸಿದರು.
ಬಿಜೆಪಿಯು ಮಧ್ಯಪ್ರದೇಶದಲ್ಲಿ ಮಾಡಿದಂತೆ ರಾಜಸ್ಥಾನದಲ್ಲೂ ಮಾಡಲು ಮುಂದಾಗಿದೆ ಎಂದು ತಿಳಿದು ಬಂದಿದೆ. ಆದರೆ ಬಿಜೆಪಿಯ ಯತ್ನ ವಿಫಲ. ಕಾಂಗ್ರೆಸ್ ಶಾಸಕರೆಲ್ಲರೂ ಒಂದಾಗಿದ್ದಾರೆ ಎಂದು ಹೇಳಿದರು.
ರಾಜ್ಯಸಭೆಯನ್ನು ಗೆಲ್ಲಲೆಂದು ಬಿಜೆಪಿಯು ಶಾಸಕರ ಖರೀದಿ ಮಾಡಲು ಯತ್ನಿಸುತ್ತಿದೆ. ಆದರೆ ಈಗ ಶಾಸಕರನ್ನು ಖರೀದಿ ಮಾಡಲು ಸಾಧ್ಯವಾಗುತ್ತಿಲ್ಲ ಎಂದು ಚುನಾವಣೆಯನ್ನೇ ಮುಂದೂಡುತ್ತಿದೆ ಎಂದು ಪ್ರಧಾನಿ ಮೋದಿ ವಿರುದ್ಧ ವಾಗ್ದಾಳಿ ನಡೆಸಿದರು.
ಇನ್ನು ಕಾಂಗ್ರೆಸ್ ತೊರೆದು ಬಿಜೆಪಿ ಸೇರಿದವರ ಪರಿಸ್ಥಿತಿ ಈಗ ಇಕ್ಕಟ್ಟಿಗೆ ಸಿಲುಕಿದಂತಾಗಿದೆ ಎಂದಿದ್ದಾರೆ.