ಶ್ರೀನಗರ, ಜೂ 11 (Daijiworld News/MSP): ದಕ್ಷಿಣ ಕಾಶ್ಮೀರದ ಶೋಪಿಯಾನ್ ಜಿಲ್ಲೆಯಲ್ಲಿ ಕಳೆದ ಎರಡುವಾರಗಳಿಂದ ನಡೆಯುತ್ತಿರುವ ಉಗ್ರರ ಬೇಟೆಯನ್ನು ಭಾರತೀಯ ಭದ್ರತಾ ಪಡೆಗಳು ಮತ್ತಷ್ಟು ತೀವ್ರಗೊಳಿಸಿವೆ.
ಜಮ್ಮು ಮತ್ತು ಕಾಶ್ಮೀರದ ಬದ್ಗಾಂ ಜಿಲ್ಲೆಯ ಪಠಾಣ್ಪುರ್ ನಲ್ಲಿ ಗುರುವಾರ ಬೆಳಗ್ಗೆ ಭದ್ರತಾಪಡೆಗಳೊಂದಿಗೆ ನಡೆದ ಭೀಕರ ಗುಂಡಿನ ಕಾಳಗದಲ್ಲಿ ಇಬ್ಬರು ಉಗ್ರಗಾಮಿಗಳು ಹತರಾಗಿದ್ದು, ವಿಧ್ವಂಸಕ ಕೃತ್ಯ ಯತ್ನ ವಿಫಲಗೊಂಡಂತಾಗಿದೆ. ಹತ್ಯೆಯಾದ ಉಗ್ರರಿಂದ ಭಾರೀ ಪ್ರಮಾಣದ ಶಸ್ತ್ರಾಸ್ತ್ರಗಳು ಮತ್ತು ಮದ್ದುಗುಂಡುಗಳನ್ನು ವಶಪಡಿಸಿಕೊಳ್ಳಲಾಗಿದೆ.
ಶೋಪಿಯಾನ್ ಜಿಲ್ಲೆಯಲ್ಲಿ ಸುಗೂ ಹೆಂಧಮಾ ಪ್ರದೇಶದಲ್ಲಿ ಉಗ್ರರು ಅವಿತಿರುವ ಸುಳಿವಿನ ಮೇರೆಗೆ ಬುಧವಾರ ಬೆಳಗ್ಗೆ ಭದ್ರತಾಪಡೆಗಳು ನಡೆಸಿದ ಗುಂಡಿನ ಕಾಳಗದಲ್ಲಿ ಕಮಾಂಡರ್ ಸೇರಿದಂತೆ ಐವರು ಉಗ್ರಗಾಮಿಗಳು ಹತರಾಗಿದ್ದರು. ಇದರೊಂದಿಗೆ ಕಳೆದ ಎರಡುವಾರಗಳಲ್ಲಿ ದಿನಗಳಲ್ಲಿ ಒಟ್ಟು 27 ಭಯೋತ್ಪಾದಕರನ್ನು ಯೋಧರು ಹೊಡೆದುರುಳಿಸಿದ್ದು, ಭಾರೀ ವಿಧ್ವಂಸಕ ಕೃತ್ಯಗಳನ್ನು ನಿಷ್ಕ್ರಿಯಗೊಳಿಸಿದ್ದಾರೆ.
ದಕ್ಷಿಣ ಕಾಶ್ಮೀರ ಜಿಲ್ಲೆಯ ಶೋಫಿಯಾನ್ ಜಿಲ್ಲೆಯ ರೆಹಾನ್ ಮತ್ತು ಪಿಜ್ಜೋರಾ ಪ್ರದೇಶದಲ್ಲಿ ಭದ್ರತಾಪಡೆಗಳು ಮೂರು ದಿನಗಳ ಹಿಂದಷ್ಟೇ ನಡೆಸಿದ ಯಶಸ್ವಿ ಕಾರ್ಯಾಚರಣೆಯಲ್ಲಿ ಹಿಬ್ಬುಲ್ ಮುಜಾಹಿದ್ಧೀನ್ (ಎಚ್ಎಂ) ಉಗ್ರಗಾಮಿ ಸಂಘಟನೆಯ ಒಂಭತ್ತು ಉಗ್ರರು ಹತರಾಗಿದ್ದರು.