ಕೊಚ್ಚಿ, ಜೂ.11 (DaijiworldNews/MB) : ಸುಮಾರು 8 ತಿಂಗಳುಗಳ ಹಿಂದೆ ವಿಮಾನ ವಾಹನ ನೌಕೆ ಐಎನ್ಎಸ್ ವಿಕ್ರಾಂತ್ನಿಂದ ನಾಲ್ಕು ಹಾರ್ಡ್ ಡಿಸ್ಕ್ ಹಾಗೂ ಇತರ ಉಪಕರನಗಳನ್ನು ಕಳ್ಳತನ ಮಾಡಿದ್ದ ಪ್ರಕರಣಕ್ಕೆ ಸಂಬಂಧಿಸಿ ರಾಷ್ಟ್ರೀಯ ತನಿಖಾ ದಳ (ಎನ್ಐಎ) ಬಿಹಾರ ಹಾಗೂ ರಾಜಸ್ತಾನ ಮೂಲದ ಇಬ್ಬರು ಆರೋಪಿಗಳನ್ನು ಬುಧವಾರ ಬಂಧಿಸಿದ್ದಾರೆ.
ಬಂಧಿತ ಆರೋಪಿಗಳಾದ ಬಿಹಾರದ ಸುಮಿತ್ ಕುಮಾರ್ ಸಿಂಗ್ (23) ಹಾಗೂ ರಾಜಸ್ತಾನದ ದಯಾ ರಾಮ (22) ಎರಡು ವರ್ಷಗಳ ಹಿಂದೆ ಈ ಹಡಗಿನಲ್ಲಿ ಪೇಂಟಿಂಗ್ ಕೆಲಸ ಮಾಡುತ್ತಿದ್ದರು. ಅವರು ಕಳ್ಳತನ ಮಾಡಿದ ಕೆಲವು ಸಾಧನಗಳನ್ನು ವಶಕ್ಕೆ ಪಡೆಯಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಕೊಚ್ಚಿನ್ ಶಿಪ್ಯಾರ್ಡ್ ಲಿಮಿಟೆಡ್ (ಸಿಎಸ್ಎಲ್) ನಿರ್ಮಿಸಿರುವ ಈ ನೌಕೆಯು ಸ್ಥಳೀಯವಾಗಿ ನಿರ್ಮಿಸಲಾದ ದೇಶದ ಮೊದಲ ನೌಕೆಯಾಗಿದ್ದು ಈ ನೌಕೆಯಲ್ಲಿ ಕಳವಾದ ಬಗ್ಗೆ ಕಳೆದ ಸೆಪ್ಟೆಂಬರ್ನಲ್ಲಿ ಸಿಎಸ್ಎಲ್ ಜನರಲ್ ಮ್ಯಾನೇಜರ್ ಸಲ್ಲಿಸಿದ್ದ ದೂರಿನ ಆಧಾರದ ಮೇಲೆ ಕೇರಳ ಪೊಲೀಸರು ಪ್ರಕಣ ದಾಖಲಿಸಿದ್ದು ಅದರ ತನಿಖೆಯನ್ನು ಬಳಿಕ ಎನ್ಐಎಗೆ ವರ್ಗಾವಣೆ ಮಾಡಲಾಗಿತ್ತು.
ಈ ಪ್ರಕರಣಕ್ಕೆ ಸಂಬಂಧಿಸಿ ಎನ್ಐಎ ಅಧಿಕಾರಿಗಳು ಕೇಂದ್ರ ಕೈಗಾರಿಕಾ ಭದ್ರತಾ ಪಡೆ (ಸಿಐಎಸ್ಎಫ್) ಹಾಗೂ ಸಿಎಸ್ಎಲ್ ನೌಕರರು, ಗುತ್ತಿಗೆ ಕಾರ್ಮಿಕರು ಹಾಗೂ ಇತರರು ಸೇರಿದಂತೆ 1,200 ಕ್ಕೂ ಅಧಿಕ ಜನರ ಬೆರಳಚ್ಚುಗಳನ್ನು ಸಂಗ್ರಹ ಮಾಡಲಾಗಿತ್ತು. ಹಾಗೆಯೇ ಈ ಕಳ್ಳತನದ ಬಗ್ಗೆ ಮಾಹಿತಿ ನೀಡಿದವರಿಗೆ 5 ಲಕ್ಷ ರೂ ಬಹುಮಾನ ಘೋಷಿಸಲಾಗಿತ್ತು.