ಕೊಲ್ಕತ್ತಾ, ಜೂ 11 (DaijiworldNews/PY) : ನಾನು ಮೊದಲು ಕೊರೊನಾ ಎಕ್ಸ್ಪ್ರೆಸ್ ಪದವನ್ನು ಬಳಕೆ ಮಾಡಲಿಲ್ಲ. ಜನರು ಹಾಗೆ ಹೇಳುತ್ತಿದ್ದಾರೆ ಎಂದು ಹೇಳಿದೆ ಎಂದು ಪಶ್ಚಿಮ ಬಂಗಾಳ ಸಿಎಂ ಮಮತಾ ಬ್ಯಾನರ್ಜಿ ಹೇಳಿದ್ದಾರೆ.
ಬಿಜೆಪಿಯ ಜನ ಸಂವಾದ ವರ್ಚುವಲ್ ರ್ಯಾಲಿಯಲ್ಲಿ ಪಶ್ಚಿಮ ಬಂಗಾಳದ ಕಾರ್ಯಕರ್ತರೊಂದಿಗೆ ಮಾತನಾಡಿದ್ದ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು, ಮಮತಾ ದೀದಿ ನೀವು ನಾಮಕರಣ ಮಾಡಿದ ಕೊರೊನಾ ಎಕ್ಸ್ಪ್ರೆಸ್ ಹೆಸರು ನಿಮ್ಮ ಎಕ್ಸಿಟ್ ಎಕ್ಸ್ಪ್ರೆಸ್ ಆಗಲಿದೆ ಎಂದು ಟೀಕೆ ಮಾಡಿದ್ದರು.
ಇದೀಗ ಅಮಿತ್ ಶಾ ಅವರ ಟೀಕೆಗೆ ತಿರುಗೇಟು ನೀಡಿರುವ ದೀದಿ, ಕೇಂದ್ರ ಸರ್ಕಾರವು ಶ್ರಮಿಕ್ ಸ್ಪೆಷಲ್ ರೈಲುಗಳನ್ನು ಲಾಕ್ಡೌನ್ ಘೋಷಣೆಯಾಗುವ ಒಂದು ವಾರದ ಮೊದಲು ಓಡಿಸಿದ್ದರೆ ಕಾರ್ಮಿಕರು ಮೂರು ತಿಂಗಳು ಪಾಡು ಪಡಬೇಕಾಗಿರಲಿಲ್ಲ ಎಂದಿದ್ದಾರೆ.
ಶ್ರಮಿಕ್ ಸ್ಪೆಷಲ್ ರೈಲುಗಳೇ ಪಶ್ಚಿಮ ಬಂಗಾಳದಲ್ಲಿ ಹೆಚ್ಚುತ್ತಿರುವ ಕೊರೊನಾ ಸೋಂಕು ಪ್ರಕರಣಗಳಿಗೆ ಕಾರಣ. ಅವು ಕೊರೊನಾ ಎಕ್ಸ್ಪ್ರೆಸ್ಗಳು ಎಂದು ದೀದಿ ಟೀಕೆ ಮಾಡಿದ್ದರು.
ಲಾಕ್ಡೌನ್ ಘೋಷಣ ಆದ ಬಳಿಕ ಇಲ್ಲಿಯವರೆಗೆ ಸುಮಾರು 11 ಲಕ್ಷ ವಲಸೆ ಕಾರ್ಮಿಕರು ಪಶ್ಚಿಮ ಬಂಗಾಳ ಪ್ರವೇಶಿಸಿದ್ದಾರೆ. ಮುಂದಿನ ದಿನಗಳಲ್ಲಿ ಇನ್ನೂ 30 ಸಾವಿರ ಮಂದಿ 22 ರೈಲುಗಳಲ್ಲಿ ಪಶ್ಚಿಮ ಬಂಗಾಳಕ್ಕೆ ಬರಲಿದ್ದಾರೆ. ಪಶ್ಚಿಮ ಬಂಗಾಳಕ್ಕೆ ಒಟ್ಟು 255 ಶ್ರಮಿಕ್ ಸ್ಪೆಷಲ್ ರೈಲುಗಳು ವಲಸೆ ಕಾರ್ಮಿಕರನ್ನು ಕರೆತಂದಿವೆ.