ಬೆಂಗಳೂರು, ಜೂ 11 (Daijiworld News/MSP): ಮುಂಜಾಗ್ರತಾ ಕ್ರಮದೊಂದಿಗೆ ಕಾರ್ಯಕ್ರಮ ಮಾಡಿದರೆ ನಮ್ಮದೇನೂ ಅಭ್ಯಂತರ ಇಲ್ಲ ಎಂದು ಕೆಪಿಸಿಸಿ ಅಧ್ಯಕ್ಷ ಡಿಕೆಶಿ ಪದಗ್ರಹಣ ಕಾರ್ಯಕ್ರಮಕ್ಕೆ ಸಿಎಂ ಬಿ.ಎಸ್. ಯಡಿಯೂರಪ್ಪ ಅನುಮತಿ ನೀಡಿದ್ದಾರೆ.
ಇಂದು ಮಾಧ್ಯಮಗಳಿಗೆ ಪ್ರತಿಕ್ರಿಯಿಸಿ ಮಾತನಾಡಿದ ಸಿಎಂ ಯಡಿಯೂರಪ್ಪ, " ಬುಧವಾರ ರಾತ್ರಿ ಡಿ.ಕೆ ಶಿವಕುಮಾರ್ ಅವರೊಂದಿಗೆ ಮಾತನಾಡಿದ್ದೇನೆ. ಪದಗ್ರಹಣ ಕಾರ್ಯಕ್ರಮ ಮಾಡಿಕೊಳ್ಳಲು ಅನುಮತಿ ನೀಡಿದ್ದೇನೆ. ಆದರೆ ಯಾವುದೇ ಕಾರಣಕ್ಕೂ ಹೆಚ್ಚು ಜನರು ಸೇರಿದಂತೆ ಹೇಳಿದ್ದೇನೆ. ಇದಕ್ಕೆ ಅವರು ಎಲ್ಲಾ ಮುಂಜಾಗ್ರತಾ ಕ್ರಮ ಕೈಗೊಳ್ಳುವುದಾಗಿ ಹೇಳಿದ್ದಾರೆ. ಹಾಗೇ ಮುಂಜಾಗ್ರತಾ ಕ್ರಮದೊಂದಿಗೆ ಕಾರ್ಯಕ್ರಮ ಮಾಡಿದರೆ ನಮ್ಮದೇನೂ ಅಭ್ಯಂತರ ಇಲ್ಲ. ಯಾವಾಗ ಬೇಕಾದರೂ ಕಾರ್ಯಕ್ರಮ ಮಾಡಲಿ" ಎಂದು ಹೇಳಿದ್ದಾರೆ.
ಲಾಕ್ಡೌನ್ ಮಾರ್ಗಸೂಚಿ ಹಿನ್ನೆಲೆಯಲ್ಲಿ ರಾಜಕೀಯ ಕಾರ್ಯಕ್ರಮಕ್ಕೆ ಅನುಮತಿ ನೀಡಲಾಗುವುದಿಲ್ಲ ಎಂದು ಹೇಳಿ ಸರ್ಕಾರ ಈ ಕಾರ್ಯಕ್ರಮಕ್ಕೆ ಅನುಮತಿ ನಿರಾಕರಿಸಿತ್ತು. ಲಾಕ್ಡೌನ್ ಕಾರಣಕ್ಕೇ ಎರಡು ಬಾರಿ ಮುಂದೂಡಿಕೆಯಾದ ಪದಗ್ರಹಣ ಸಮಾರಂಭ ಮೂರನೇ ಬಾರಿ ಜೂನ್ 14ಕ್ಕೆ ನಿಗದಿಯಾಗಿತ್ತು.
ಸರಕಾರವೇ ಅಡ್ಡಿ ಮಾಡಿದರೂ ಕಾನೂನು ರೀತಿಯಲ್ಲಿಯೇ ಅನುಮತಿ ಪಡೆದು ಕಾರ್ಯಕ್ರಮ ಮಾಡಿಯೇ ಸಿದ್ದ ಎಂದು ಡಿಕೆಶಿ ಸಹಿತ ಕಾಂಗ್ರೆಸ್ಸಿಗರು ರಾಜ್ಯ ಸರ್ಕಾರದ ಅನುಮತಿ ನೀಡದ ನಡೆಯ ವಿರುದ್ದ ಅಸಮಧಾನ ವ್ಯಕ್ತಪಡಿಸಿದ್ದರು.ಇದೀಗ ಕಾರ್ಯಕ್ರಮಕ್ಕೆ ಸಿಎಂ ಅನುಮತಿ ನೀಡಿರುವ ಹಿನಲೆಯಲ್ಲಿ ಜೂನ್ 14ರಂದೇ ಡಿಕೆ ಶಿವಕುಮಾರ್ ಪದಗ್ರಹಣ ಕಾರ್ಯಕ್ರಮ ನಡೆಯುವ ಸಾಧ್ಯತೆ ಇದೆ.