ಶ್ರೀನಗರ, ಜೂ.11 (DaijiworldNews/MB) : ಪಾಕಿಸ್ತಾನ ಸೇನಾಪಡೆ ಕದನ ವಿರಾಮ ಉಲ್ಲಂಘನೆ ಮಾಡಿ ಶೆಲ್ ಹಾಗೂ ಶಸ್ತ್ರಾಸ್ತ್ರ ದಾಳಿ ನಡೆಸಿದ್ದು ಭಾರತೀಯ ಸೇನೆಯ ಓರ್ವ ಯೋಧ ಹುತಾತ್ಮರಾಗಿದ್ದಾರೆ.
ಜಮ್ಮು-ಕಾಶ್ಮೀರದ ರಜೌರಿ, ಪೂಂಚ್ ಮತ್ತು ಕತುವಾ ಜಿಲ್ಲೆಗಳ ಮಂಜಕೋಟೆ, ಕೆರಿ, ಬಾಲಾಕೋಟ್ ಮತ್ತು ಕರೊಲ್ ಮೈಟ್ರಾನ್ ಎಂಬ ವಲಯಗಳಲ್ಲಿ ಪಾಕಿಸ್ತಾನವು ಕಳೆದ ರಾತ್ರಿಯಿಂದ ಕದನ ವಿರಾಮ ಉಲ್ಲಂಘಿಸುತ್ತಿದ್ದು ಜಮ್ಮು ಕಾಶ್ಮೀರದ ರಜೌರಿ ಜಿಲ್ಲೆಯಲ್ಲಿ ಪಾಕಿಸ್ತಾನದ ಸೇನೆ ನಡೆಸಿದ ಶಸ್ತ್ರಾಸ್ತ್ರ ಮತ್ತು ಶೆಲ್ ದಾಳಿಯಿಂದಾಗಿ ಓರ್ವ ಭಾರತೀಯ ಯೋಧ ಹುತಾತ್ಮನಾಗಿದ್ದಾನೆ.
ಈ ಮೊದಲು ರಜೌರಿ ಜಿಲ್ಲೆಯ ಮಂಜಕೋಟೆ ವಲಯದಲ್ಲಿ ಪಾಕಿಸ್ತಾನವು ನಾಗರಿಕರ ಮನೆಗಳ ಮೇಲೆ ದಾಳಿ ನಡೆಸಿದ್ದು ವ್ಯಕ್ತಿಯೊಬ್ಬರು ಗಾಯಗೊಂಡಿದ್ದಾರೆ.
ಇನ್ನು ಪಾಕ್ ಸೇನೆಗೆ ಪ್ರತ್ಯುತ್ತರ ನೀಡಿರುವ ಭಾರತವೂ ಕೂಡಾ ಪ್ರತಿದಾಳಿ ನಡೆಸಿದೆ ಎಂದು ವರದಿ ತಿಳಿಸಿದೆ.