ನವದೆಹಲಿ, ಜೂ 11 (DaijiworldNews/PY) : ಚೀನಾ ಲಡಾಖ್ನ ಒಂದಿಷ್ಟು ಜಾಗವನ್ನು ಆಕ್ರಮಣ ಮಾಡಿದ್ದರೂ ಕೂಡಾ ಪ್ರಧಾನಿ ನರೇಂದ್ರ ಮೋದಿ ಅವರು ಮೌನವಾಗಿದ್ದಾರೆ ಎಂದು ಕಾಂಗ್ರೆಸ್ ಆರೋಪ ಮಾಡಿದೆ.
ಸರ್ಕಾರವು ಚೀನಾದ ಸೇನೆಯನ್ನು ಹಿಮ್ಮೆಟ್ಟಿಸಲು ಯಾವ ಕ್ರಮ ಕೈಗೊಂಡಿದೆ ಎಂದು ಜನರಿಗೆ ತಿಳಿಸಬೇಕು. ಕಾನೂನು ಸಚಿವ ರವಿಶಂಕರ್ ಪ್ರಸಾದ್ ಅವರು ಚೀನಾ ಅತಿಕ್ರಮಣದ ಬಗ್ಗೆ ಪ್ರಶ್ನೆ ಮಾಡಿದ್ದಕ್ಕೆ ನುಣುಚಿಕೊಂಡಿದ್ದಾರೆ ಹಾಗೂ ಬೇಜವಾಬ್ದಾರಿಯಿಂದ ಮಾತನಾಡಿದ್ದಾರೆ ಎಂದು ಪಕ್ಷದ ವಕ್ತಾರ ಮನೀಶ್ ತಿವಾರಿ ಹೇಳಿದ್ದಾರೆ.
ಜನರಿಗೆ ಲಡಾಖ್ನಲ್ಲಿ ಏನಾಗಿದೆ ಎನ್ನುವ ಸತ್ಯವನ್ನು ತಿಳಿಸುವ ಬದಲು ರವಿಶಂಕರ್ ಪ್ರಸಾದ್ ಅವರು ಅಪ್ರಜ್ಞಾಪೂರ್ವಕವಾಗಿ ನಡೆದುಕೊಂಡಿರುವುದು ದುರದೃಷ್ಟಕರ ಎಂದು ಹೇಳಿದ್ದಾರೆ.
ಇಡೀ ದೇಶ ಒಂದೇ ಧ್ವನಿಯಲ್ಲಿ ಮಾತನಾಡಬೇಕಾದ ಸಂದರ್ಭದಲ್ಲಿ ರಾಹುಲ್ ಗಾಂಧಿ ಅವರು ದೇಶದ ಭದ್ರತೆಯಂತಹ ಸೂಕ್ಷ್ಮವಾದ ವಿಚಾರಗಳನ್ನು ಟ್ವಿಟರ್ನಲ್ಲಿ ಪ್ರಸ್ತಾಪಿಸಿದ್ದಾರೆ ಎಂದು ರವಿಶಂಕರ್ ಪ್ರಸಾದ್ ದೂರಿದ್ದರು.
ಈ ಬಗ್ಗೆ ತಿರುಗೇಟು ನೀಡಿರುವ ತಿವಾರಿ ಅವರು, ದೇಶಭಕ್ತಿ, ರಾಷ್ಟ್ರೀಯತೆ ವಿಚಾರಗಳು ಬಿಜೆಪಿಯ ಏಕಸ್ವಾಮ್ಯಗಳಲ್ಲ. ಸರ್ಕಾರಕ್ಕೆ ಪ್ರಶ್ನೆ ಕೇಳಿದರೆ ದೇಶಾಭಿಮಾನ ಇಲ್ಲ ಎಂದು ಅಲ್ಲ. ಆ ಪ್ರಶ್ನೆಗಳಿಗೆ ಉತ್ತರ ನೀಡದಿದ್ದರೆ ಅದು ನಿರಭಿಮಾನ ಎಂದು ಎನಿಸಿಕೊಳ್ಳುತ್ತದೆ ಎಂದು ಹೇಳಿದ್ದಾರೆ.
ಚೀನಾವು ಉಭಯ ದೇಶಗಳ ಮಾತುಕತೆಯ ಸಂದರ್ಭ ಗಟ್ಟಿ ನಿಲುವು ತಳೆದಿದ್ದು, ಇಡೀ ಗಾಲ್ವಾನ್ ಕಣಿವೆ ಹಾಗೂ ಪಾಂಗೊಂಗ್ ಟ್ಸೊನ ಕೆಲ ಭಾಗವು ತನ್ನದು ಎಂದು ಹೇಳಿಕೊಂಡಿದೆ ಎಂದು ಉಲ್ಲೇಖವಿರುವ ಪತ್ರಿಕೆಯೊಂದರ ವರದಿಯನ್ನು ಬುಧವಾರ ರಾಹುಲ್ ಗಾಂಧಿ ಟ್ವಿಟರ್ನಲ್ಲಿ ಟ್ಯಾಗ್ ಮಾಡಿದ್ದರು.