ನವದೆಹಲಿ, ಜೂ 11 (Daijiworld News/MSP): ವಿಶ್ವದ ಇತರ ದೇಶಗಳಂತೆ ಕೊರೊನಾ ವೈರಸ್ ಸಾಂಕ್ರಾಮಿಕ ರೋಗದಿಂದ ದೇಶವು ಪರೀಕ್ಷಾ ಅವಧಿಯನ್ನು ಎದುರಿಸುತ್ತಿದ್ದು ಇದರೊಂದಿಗೆ ಪ್ರವಾಹ, ಬೆಳೆಗಳ ಮೇಲೆ ಮಿಡತೆಗಳ ಹಾವಳಿ, ಆಲಿಕಲ್ಲು ಮಳೆ, ತೈಲ ಬಾವಿಯಲ್ಲಿ ಬೆಂಕಿ, ಸಣ್ಣ ಭೂಕಂಪಗಳು, ಚಂಡಮಾರುತಗಳು ಇವೆಲ್ಲಾ ಕಾಣಿಸಿಕೊಂಡಿದ್ದು ಇಂತಹ ಪ್ರಾಕೃತಿಕ ವಿಕೋಪಗಳನ್ನು ನಾವೆಲ್ಲರೂ ಎದುರಿಸಬೇಕಾಗಿ ಬಂದಿದೆ ಎಂದು ಪ್ರಧಾನ ಮಂತ್ರಿ ನರೇಂದ್ರ ಮೋದಿ ಹೇಳಿದ್ದಾರೆ.
ದೆಹಲಿಯಲ್ಲಿ ವಿಡಿಯೊ ಕಾನ್ಫರೆನ್ಸ್ ಮೂಲಕ ಭಾರತೀಯ ವಾಣಿಜ್ಯ ಮಂಡಳಿಯ 95ನೇ ವಾರ್ಷಿಕೋತ್ಸವದ ಅಂಗವಾಗಿ ಮಾತನಾಡಿದ ಅವರು, ಸಮಸ್ಯೆಗಳಿಗೆ ಭಯಗೊಂಡರೆ ಮುಂದೆ ಸಾಗಲಾರೆವು. ನಮ್ಮ ಶಕ್ತಿ ಮತ್ತು ಸಾಮರ್ಥ್ಯಗಳನ್ನು ಪ್ರದರ್ಶಿಸುವ ಸಮಯ ಇದಾಗಿದೆ. ನಮ್ಮ ದೇಶದ ಪ್ರತಿಯೊಬ್ಬ ನಾಗರಿಕ ಕೂಡ ಈ ಕೊರೊನಾ ಬಿಕ್ಕಟ್ಟನ್ನು ಅವಕಾಶವಾಗಿ ಬದಲಾಯಿಸಿ ಸ್ವಾವಲಂಬನೆಯತ್ತ ಹೆಜ್ಜೆ ಹಾಕಬೇಕು ಎಂದು ಕರೆ ನೀಡಿದ್ದಾರೆ.
ಸ್ವದೇಶಿ ಉತ್ಪನ್ನಗಳನ್ನು ನಾವು ಬಳಸಿ ಇತರರನ್ನು ಸ್ವದೇಶಿ ಉತ್ಪನ್ನಗಳನ್ನು ಬಳಸುವಂತೆ ಪ್ರೇರೇಪಿಸುವಂತಹ ಸರಳ ಕೆಲಸದಿಂದ ಸ್ವಾಲಂಬಿಗಳಾಗಬಹುದು. ಸ್ವದೇಶಿ ಘೋಷಣೆಯೊಂದಿಗೆ ನಾವು ಮುಂದುವರಿಯಬೇಕು . ಆತ್ಮ ನಿರ್ಬಾರ್ನಿಂದ ಪ್ರೇರಿತರಾಗಿ ಭಾರತ ನಿರಂತರವಾಗಿ ಯಶಸ್ಸಿಗೆ ಪ್ರಯತ್ನಿಸಬೇಕು. ಸವಾಲುಗಳನ್ನು ಸ್ವೀಕರಿಸುವವರು ಅಂತಿಮವಾಗಿ ವಿಜೇತರಾಗುತ್ತಾರೆ ಎಂದು ಹೇಳಿದ್ದಾರೆ.
ರೈತರಿಗೆ ತಮ್ಮ ಬೆಳೆಯನ್ನು ಮಾರಾಟ ಮಾಡಲು ಸ್ವಾತಂತ್ರ್ಯ ನೀಡಲಾಗಿದೆ. ಹೀಗಾಗಿ ರೈತರು ದೇಶದ ಯಾವುದೇ ಕಡೆಗಳಲ್ಲಿ ತಮ್ಮ ಉತ್ಪನ್ನಗಳನ್ನು ಮುಕ್ತವಾಗಿ ಮಾರಾಟ ಮಾಡಬಹುದಾಗಿದೆ. ಪಶ್ಚಿಮ ಬಂಗಾಳದಲ್ಲಿ ಉತ್ಪಾದನಾ ಕ್ಷೇತ್ರಗಳನ್ನು ಪುನರುಜ್ಜೀವನಗೊಳಿಸಬೇಕು . ಇದು ಹೂಡಿಕೆಯ ಸಮಯವಾಗಿದ್ದು ಸಂಪ್ರದಾಯವಾದಿ ನಿರ್ಧಾರಗಳ ಸೂಕ್ತ ಸಮಯ ಇದಲ್ಲ ಎಂದಿದ್ದಾರೆ.