ಬೆಂಗಳೂರು, ಜೂ 11 (Daijiworld News/MSP): ರಾಜ್ಯದಲ್ಲಿ ಪ್ರಾಥಮಿಕ ಶಾಲಾ ಆನ್ಲೈನ್ ಶಿಕ್ಷಣಕ್ಕೆ ತೀವ್ರ ವಿರೋಧ ವ್ಯಕ್ತವಾದ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ಎಲ್ಕೆಜಿ, ಯುಕೆಜಿ ಹಾಗೂ ಪ್ರಾಥಮಿಕ ಹಂತದ 7ನೇ ತರಗತಿವರೆಗೆ ಆನ್ಲೈನ್ ಶಿಕ್ಷಣವನ್ನು ಗುರುವಾರ ರದ್ದುಗೊಳಿಸಿದೆ.
ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಅವರ ನೇತೃತ್ವದ ನಡೆದ ಸಚಿವ ಸಂಪುಟ ಸಭೆಯಲ್ಲಿ ಈ ತೀರ್ಮಾನ ಕೈಗೊಳ್ಳಲಾಗಿದೆ ಎಂದು ಕಾನೂನು ಸಚಿವ ಜೆಸಿ ಮಾಧುಸ್ವಾಮಿ ಅವರು ಮಾಹಿತಿ ನೀಡಿದ್ದಾರೆ.
ಶುಲ್ಕದ ಆಸೆಗೆ ಬಿದ್ದು ಆನ್ಲೈನ್ ಪಾಠಕ್ಕೆ ಮುಂದಾಗಿದ್ದ ಖಾಸಗಿ ಶಾಲೆಗಳ ಆಸೆಗೆ ಈ ಮೂಲಕ ತಣ್ಣೀರೆರಚಿದಾಂತಾಗಿದೆ. ಲ್ಕೆಜಿಯಿಂದ 5ನೇ ತರಗತಿವರೆಗೆ ಎಲ್ಲ ಪಠ್ಯಕ್ರಮದ (ರಾಜ್ಯ, ಸಿಬಿಎಸ್ಇ, ಐಸಿಎಸ್ಇ) ಶಾಲೆಗಳಿಗೂ ಅನ್ವಯಿಸುವಂತೆ ಆನ್ಲೈನ್ ಶಿಕ್ಷಣವನ್ನು ರದ್ದುಗೊಳಿಸಲಾಗಿದೆ ಎಂದು ಸಚಿವ ಸುರೇಶ್ ಕುಮಾರ್ ಬುಧವಾರ ಮಾಹಿತಿ ನೀಡಿದ್ದರು.
ಇದರ ಬೆನ್ನಲ್ಲೇ , ಆನ್ ಲೈನ್ ಶಿಕ್ಷಣದ ಕುರಿತು ಸಂಪುಟ ಸಭೆಯಲ್ಲಿ ಚರ್ಚಿಸಲಾಗಿದ್ದು ಆನ್ ಲೈನ್ ಶಿಕ್ಷಣವನ್ನು 5ನೇ ತರಗತಿ ಬದಲು 7ನೇ ತರಗತಿವರೆಗೂ ರದ್ದುಗೊಳಿಸುವ ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದು ಮಾಧುಸ್ವಾಮಿ ಮಾಹಿತಿ ನೀಡಿದ್ದಾರೆ.