ಕಠ್ಮಂಡು, ಜೂ 11 (DaijiworldNews/PY) : ಭಾರತವು ನೇಪಾಳಕ್ಕೆ ಸುಳ್ಳು ಕಾಳಿ ನದಿಯನ್ನು ತೋರಿಸಿ, ಸೇನೆಯನ್ನು ತಂದಿರಿಸಿ ಮೋಸ ಮಾಡಿದೆ. ನಮಗೆ ಸೇರಿದ ಭೂಪ್ರದೇಶಗಳನ್ನು ತನ್ನದೆಂದು ವಾದ ಮಾಡುತ್ತಿದೆ ಎಂದು ನೇಪಾಳದ ಪ್ರಧಾನಿ ಕೆ.ಪಿ ಶರ್ಮ ಒಲಿ ಸಂಸತ್ತಿನಲ್ಲಿ ಹೇಳಿದರು.
ಸಂಸತ್ತಿನಲ್ಲಿ ಬಜೆಟ್ ಮೇಲಿನ ಚರ್ಚೆ ವೇಳೆ ಈ ವಿಚಾರ ಪ್ರಸ್ತಾಪ ಮಾಡಿದ ಒಲಿ ಅವರು, ಭಾರತವು ಮೋಸದಿಂದ ತನ್ನದೆಂದು ಹೇಳಿಕೊಳ್ಳುತ್ತಿರುವ ಭೂಪ್ರದೇಶಗಳನ್ನು ಮರಳಿ ನಮ್ಮ ಸುಪರ್ದಿಗೆ ಪಡೆದುಕೊಳ್ಳಲು ದೃಢ ನಿಶ್ಚಯ ಮಾಡಿದ್ದೇವೆ. ಇಡೀ ದೇಶದ ಈ ವಿಚಾರದಲ್ಲಿ ಒಂದಾಗಿದೆ ಎಂದು ತಿಳಿಸಿದರು.
ಕಾಲಾಪಾನಿ, ಲಿಪುಲೇಖ್ ಹಾಗೂ ಲಿಂಪಿಯಾಧುರಾ ಪ್ರದೇಶಗಳನ್ನು ಮತ್ತೆ ನಮ್ಮ ವಶಕ್ಕೆ ಪಡೆದುಕೊಳ್ಳಲು ಬದ್ದರಾಗಿದ್ದೇವೆ. ಭಾರತವು ಈ ಭೂಪ್ರದೇಶಗಳನ್ನು ಅಕ್ರಮವಾಗಿ ಕಬಳಿಸಿದೆ. ತನ್ನ ಭೂಪಟಗಳಲ್ಲಿ ತೋರಿಸುತ್ತಿದೆ ಎಂದರು.
ನೇಪಾಳ ಟಿಬೆಟ್ ಮಾಡಿದ ತಪ್ಪನ್ನು ಮಾಡಬಾರದು ಎಂಬ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯ ನಾಥ್ ಅವರ ಹೇಳಿಕೆಯನ್ನು ಪ್ರಸ್ತಾಪಿಸಿದ ಒಲಿ, ಈ ಹೇಳಿಯಿಂದಾಗಿ ನೇಪಾಳದ ಸಾರ್ವಭೌಮತೆಗೆ ಧಕ್ಕೆಯಾಗಿದೆ ಎಂದು ಹೇಳಿದರು.
ಸಂವಿಧಾನ ತಿದ್ದುಪಡಿ ಕಾಯ್ದೆಯ ಮೂಲಕ ನೇಪಾಳದ ಭೂಪಟ ಪರಿಷ್ಕರಿಸುವ ಪ್ರಸ್ತಾಪಕ್ಕೆ ಎಲ್ಲಾ ರಾಜಕೀಯ ಪಕ್ಷಗಳು ಬೆಂಬಲ ನೀಡಿವೆ. ಇದಕ್ಕೆ ವಿರೋಧ ವ್ಯಕ್ತಪಡಿಸಿದ್ದ ಸರಿತಾ ಗಿರಿ ಅವರಿಗೆ ಮಾಧೆಸ್ ಸೆಂಟ್ರಿಕ್ ಸಮಾಜವಾದಿ ಪಕ್ಷವು ಶಿಸ್ತುಕ್ರಮದ ಎಚ್ಚರಿಕೆ ನೀಡಿದ್ದು, ಕಾಯ್ದೆಯನ್ನು ಬೆಂಬಲಿಸಿವಂತೆ ಸೂಚನೆ ನೀಡಿದೆ.