ತಿರುವನಂತಪುರ, ಜೂ 11 (Daijiworld News/MSP): ಕೋವಿಡ್-19 ಪ್ರಕರಣಗಳ ಪ್ರಮಾಣ ಹೆಚ್ಚುತ್ತಿರುವುದರಿಂದ ಭಕ್ತಾದಿಗಳ ದರ್ಶನಕ್ಕೆ ಜೂ. 14ರಿಂದ ದೇವಸ್ಥಾನವನ್ನು ತೆರೆಯುವ ಪ್ರಸ್ತಾಪವನ್ನು ಕೈ ಬಿಡಬೇಕು ಎಂದು ತಿರುವಾಂಕೂರು ದೇವಸ್ವ ಮಂಡಳಿ ಮನವಿಗೆ ಸರ್ಕಾರ ಒಪ್ಪಿಗೆ ನೀಡಿದೆ.
ತಿರುವಾಂಕೂರು ದೇವಸ್ವ ಮಂಡಳಿ ಹಾಗೂ ಶಬರಿಮಲೆ ದೇಗುಲದ ಮುಖ್ಯ ತಂತ್ರಿ ಕಾಂತರಾರು ಮಹೇಶ್ ಮೋಹನಾರು ಅವರೊಂದಿಗೆ ಸಭೆ ನಡೆಸಿದ ಕೇರಳ ಸರ್ಕಾರ, ಶಬರಿಮಲೆ ದೇಗುಲದ ಪ್ರವೇಶವನ್ನು ಅನಿರ್ದಿಷ್ಟ ಕಾಲದವರೆಗೆ ಮುಂದೂಡಿದೆ. ಇದಲ್ಲದೇ, ಇದೇ ತಿಂಗಳ 19ರಂದು ನಡೆಯಬೇಕಿದ್ದ ಉತ್ಸವವನ್ನು ರದ್ದುಗೊಳಿಸಿದೆ.
ಶಬರಿಮಲೆ ದೇವಸ್ಥಾನದಲ್ಲಿ ಜೂನ್ 14ರಿಂದ ಭಕ್ತರಿಗೆ ಪ್ರವೇಶ ನೀಡುವುದಾಗಿ ಕೇರಳ ಸರ್ಕಾರ ಘೋಷಿಸಿತ್ತು. ಆದರೆ ಇದನ್ನು ದೇವಸ್ಥಾನದ ಪ್ರಧಾನ ಅರ್ಚಕ ಕಂಡರರ್ ಮಹೇಶ್ ಮೋಹನರ್ ತೀವ್ರವಾಗಿ ವಿರೋಧಿಸಿದ್ದರು. ದರ್ಶನಕ್ಕೆ ಅವಕಾಶ ಕಲ್ಪಿಸಿರುವುದಕ್ಕೆ ಮುಖ್ಯ ಅರ್ಚಕರು ಆಕ್ಷೇಪ ವ್ಯಕ್ತಪಡಿಸಿರುವುದರಿಂದ, ಪುನಃ ಚರ್ಚಿಸಿ ತೀರ್ಮಾನ ಕೈಗೊಳ್ಳಲಾಗುವುದು ಎಂದು ದೇವಸ್ವಂ ಖಾತೆ ಸಚಿವ ಕಡಕಂಪಳ್ಳಿ ಸುರೇಂದ್ರನ್ ತಿಳಿಸಿದ್ದರು. ಅದರಂತೆ ಮುಜರಾಯಿ ಸಚಿವರ ನೇತೃತ್ವದಲ್ಲಿ, ಅಧಿಕಾರಿಗಳು ಪಾಲ್ಗೊಂಡಿದ್ದ ಸಭೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ. ಈ ಮೂಲಕ 14ರಂದು ಆರಂಭಗೊಳ್ಳಬೇಕಿದ್ದ ದೇಗುಲ ಪ್ರವೇಶ ಮುಂದೂಡಿದಂತಾಗಿದೆ.