ನವದೆಹಲಿ, ಜೂ 12 (DaijiworldNews/PY) : ಕೊರೊನಾ ಬಿಕ್ಕಟ್ಟಿನ ಕಾರಣದಿಂದ ಕೆಲಸ ಕಳೆದುಕೊಂಡವರಿಗೆ ನೆರವಾಗುವ ಸಲುವಾಗಿ ತಮ್ಮ ಸರ್ಕಾರದ ನಗದು ವರ್ಗಾವಣೆ ಯೋಜನೆಯ ಮಾಹಿತಿ ಹಂಚಿಕೊಳ್ಳುವುದಕ್ಕಾಗಿ ಪಾಕ್ ಪ್ರಧಾನಿ ಇಮ್ರಾನ್ ಖಾನ್ ಅವರು ಮಾಡಿರುವ ಪ್ರಸ್ತಾಪವನ್ನು ಭಾರತ ತಿರಸ್ಕರಿಸಿದೆ.
ವರದಿಯ ಪ್ರಕಾರ, ಭಾರತದಲ್ಲಿರುವ ಶೇ.34ರಷ್ಟು ಕುಟುಂಬಗಳು ಒಂದು ವಾರಕ್ಕಿಂತ ಹೆಚ್ಚು ಹೆಚ್ಚುವರಿ ನೆರವು ಇಲ್ಲದೇ ಜೀವನ ಸಾಗಿಸುವುದು ಕಷ್ಟಸಾಧ್ಯ. ನಾನು ಸಹಾಯ ಮಾಡಲು ಸಿದ್ದ. ಅಂತರಾಷ್ಟ್ರೀಯ ಮಟ್ಟದಲ್ಲಿ ಮೆಚ್ಚುಗೆ ವ್ಯಕ್ತವಾದ ಹಾಗೂ ಯಶಸ್ವಿಯಾಗಿರುವ, ನಮ್ಮ ಸರ್ಕಾರದ ನಗದು ವರ್ಗಾವಣೆ ಯೋಜನೆಯ ಬಗ್ಗೆ ಭಾರತದೊಂದಿಗೆ ಮಾಹಿತಿಯನ್ನು ಹಂಚಿಕೊಳ್ಳಲು ಸಿದ್ದ ಎಂದು ಸುದ್ದಿ ಸಂಸ್ಥೆಯೊಂದರ ವರದಿಯನ್ನು ಲಗತ್ತಿಸಿ ಇಮ್ರಾನ್ ಖಾಮ್ ಗುರುವಾರ ಟ್ವೀಟ್ ಮಾಡಿದ್ದರು.
ಸ್ಪಷ್ಟ ಮಾಹಿತಿ ಕೊಡಬಲ್ಲ ಹೊಸ ಸಲಹೆಗಾರರ ಅಗತ್ಯ ಇಮ್ರಾನ್ ಖಾನ್ ಅವರಿಗಿದೆ. ಪಾಕಿಸ್ತಾನದ ಜಿಡಿಪಿಯ ಶೇ.90ರಷ್ಟಿದೆ. ಸಾಲದ ಸಮಸ್ಯೆಯ ಬಗ್ಗೆ ಅವರು ಎಷ್ಟು ಒತ್ತು ನೀಡುತ್ತಾರೆ ಎನ್ನುವುದು ನಮಗೆಲ್ಲಾ ತಿಳಿದಿದೆ ಎಂದು ವಕ್ತಾರರು ಹೇಳಿದ್ದಾರೆ.
ಪಾಕಿಸ್ತಾನವು, ತಮ್ಮ ದೇಶದ ಜನರಿಗೆ ನಗದು ವರ್ಗಾವಣೆ ಮಾಡುವ ಹೊರತಾಗಿ ಹೊರ ದೇಶದವರಿಗೆ ವರ್ಗಾವಣೆ ಮಾಡುವುದರಲ್ಲಿ ಹೆಸರುವಾಸಿಯಾಗಿದೆ ಎಂದು ವಿದೇಶಾಂಗ ಸಚಿವಾಲಯದ ವಕ್ತಾರ ಅನುರಾಗ್ ಶ್ರೀವಾಸ್ತವ ಹೇಳಿದ್ದಾರೆ.
ಭಾರತ ಸರಿಸುಮಾರು ಪಾಕಿಸ್ತಾನದ ಜಿಡಿಪಿಯಷ್ಟೇ ಮೊತ್ತದ ಆರ್ಥಿಕ ಪ್ಯಾಕೇಜ್ ಅನ್ನು ಘೋಷಣೆ ಮಾಡಿದೆ. ಇಮ್ರಾನ್ ಖಾನ್ ಇದನ್ನು ನೆನಪಿಸಿಕೊಳ್ಳುವುದು ಉತ್ತಮ ಎಂದು ತಿಳಿಸಿದ್ದಾರೆ.