ನವದೆಹಲಿ, ಜೂ 12 (DaijiworldNews/PY) : ಕೊರೊನಾ ಹಿನ್ನೆಲೆ ವಿದೇಶದಲ್ಲಿ ಉಳಿದಿರುವ ಭಾರತೀಯರನ್ನು ತವರಿಗೆ ಕರೆತರಲು ವಂದೇ ಭಾರತ್ ಮಿಷನ್ನ ಮೂರನೇ ಹಂತದ ಕಾರ್ಯಾಚರಣೆಯು ಗುರುವಾರ ಪ್ರಾರಂಭವಾಗಿದೆ.
ಸಾಂದರ್ಭಿಕ ಚಿತ್ರ
1,65,000ಕ್ಕೂ ಅಧಿಕ ಜನರನ್ನು ವಂದೇ ಭಾರತ್ ಮಿಷನ್ನ ಮೊದಲೆರಡು ಹಂತಗಳಲ್ಲಿ ಭಾರತಕ್ಕೆ ಮರಳಿ ಕರೆತರಲಾಗಿದೆ ಎಂದು ಕೇಂದ್ರ ಸರ್ಕಾರ ತಿಳಿಸಿದೆ.
ಮೂರನೇ ಹಂತದ ಕಾರ್ಯಾಚರಣೆಯನ್ನು ಜುಲೈ 2ರವರೆಗೆ ಕೈಗೊಳ್ಳಲಾಗಿದೆ. 43 ದೇಶಗಳಲ್ಲಿ ಉಳಿದುಕೊಂಡಿರುವ ಭಾರತೀಯರನ್ನು ಒಟ್ಟು 432 ಅಂತರರಾಷ್ಟ್ರೀಯ ವಿಮಾನಗಳು ಕರೆತರಲಿವೆ. ಮೂರನೇ ಹಂತದಲ್ಲಿ ಇಂಡಿ-ಗೊದಿಂದ 24 ಹಾಗೂ ಗೊ-ಏರ್ ಸಂಸ್ಥೆಯಿಂದ ಮೂರು ವಿಮಾನ ಸೇರಿದಂತೆ ಒಟ್ಟು 29 ಖಾಸಗಿ ವಿಮಾನಗಳು ಕಾರ್ಯನಿರ್ವಹಿಸಲಿವೆ. ಬಾರಿ ಬೇಡಿಕೆ ಇರುವ ಹಿನ್ನೆಲೆ ಅಮೆರಿಕ ಹಾಗೂ ಕೆನಡಾ ದೇಶಗಳಿಗೆ ವಿಮಾಣಗಳ ಸಂಖ್ಯೆಯನ್ನೂ ಹೆಚ್ಚಿಸಲಾಗಿದೆ ಎಂದು ವಿದೇಶಾಂಗ ಸಚಿವಾಲಯದ ವಕ್ತಾರ ಅನುರಾಗ್ ಶ್ರೀ ವಾಸ್ತವ ಹೇಳಿದ್ದಾರೆ.
ಪ್ಯಾರಿಸ್ ಹಾಗೂ ಫ್ರಾಂಕ್ಫರ್ಟ್ನಿಂದ ತಲಾ 16 ವಿಮಾನಗಳು ಅಲ್ಲಿ ಉಳಿದಿರುವ ಭಾರತೀಯರನ್ನು ಮರಳಿ ಕರೆತರಲಿವೆ. ಜಿಸಿಸಿ ದೇಶಗಳಿಂದ ಭಾರತಕ್ಕೆ 170 ವಿಮಾನಗಳು ಬಂದಿಳಿಯಲಿವೆ. ಅಮೆರಿಕದಿಂದ 53 ಹಾಗೂ ಕೆನಡಾದಿಂದ 24 ವಿಮಾನಗಳು ಬರಲಿವೆ ಎಂದು ತಿಳಿಸಿದ್ದಾರೆ.