ನವದೆಹಲಿ, ಜೂ 12 (DaijiworldNews/PY) : ದೇಶದಲ್ಲಿ ಮೊದಲ ಕೊರೊನಾ ಪ್ರಕರಣ ಜನವರಿ 30ರಂದು ಪತ್ತೆಯಾಗಿದ್ದರೂ, ಈ ಸೋಂಕು ಗಂಭೀರವಾಗಿದ್ದು, ವಿಶ್ವಕ್ಕೆ ಮಾರಕವಾಗಲಿದೆ ಎಂದು ಪ್ರಧಾನಿ ಮೋದಿ ಅವರು ಮೊದಲೇ ಎಚ್ಚರಿಕೆ ನೀಡುತ್ತಿದ್ದರು ಎಂದು ಕೇಂದ್ರ ಸಚಿವ ಪ್ರಕಾಶ್ ಜಾವಡೇಕರ್ ಹೇಳಿದ್ದಾರೆ.
ಕೇಂದ್ರದಲ್ಲಿ ಬಿಜೆಪಿ ಸರ್ಕಾರ ಒಂದು ವರ್ಷ ಪೂರ್ತಿಗೊಳಿಸಿದ ಹಿನ್ನೆಲೆಯಲ್ಲಿ ಗುಜರಾತಿನ ಸೌರಾಷ್ಟ್ರದ ಜನತೆಯನ್ನುದ್ದೇಶಿಸಿ ಜನ ಸಂವಾದ ರ್ಯಾಲಿಯಲ್ಲಿ ವಿಡಿಯೋ ಕಾನ್ಫರೆನ್ಸ್ ಮೂಲಕ ಅವರು ಗುರುವಾರ ಮಾತನಾಡಿದ ಅವರು, ಕೊರೊನಾ ವೈರಸ್ ಹೆಸರನ್ನು ಕಳೆದ ವರ್ಷದ ಅಂತ್ಯದವರೆಗೂ ಯಾರೊಬ್ಬರೂ ಕೇಳಿರಲಿಲ್ಲ. ಜನವರಿ 30ರಂದು ಭಾರತದಲ್ಲಿ (ಕೇರಳದಲ್ಲಿ) ಮೊದಲ ಪ್ರಕರಣ ಪತ್ತೆಯಾಗಿತ್ತು. ಅದಾಗಿಯೂ, ಪ್ರಧಾನಿ ಮೋದಿ ಅವರು, ಈ ಪ್ರಕರಣ ಪತ್ತೆಯಾಗುವುದಕ್ಕೂ ಒಂದು ತಿಂಗಳ ಮೊದಲೇ ಅದರ ಬಗ್ಗೆ ಎಚ್ಚರಿಕೆ ನೀಡಿದ್ದರು. ಸಚಿವ ಸಂಪುಟ ಸಭೆಗಳಲ್ಲಿ ಪ್ರತಿ ಬಾರಿಯೂ ಮಾತನಾಡುವ ಸಂದರ್ಭ ಕೊರೊನಾ ಸೋಂಕು ಗಂಭೀರವಾಗಿದ್ದು, ಇಡೀ ವಿಶ್ವವನ್ನೇ ವ್ಯಾಪಿಸುವ ಸಾಧ್ಯತೆ ಇದೆ ಎಂದು ಹೇಳುತ್ತಿದ್ದರು ಎಂದು ಜಾವಡೇಕರ್ ತಿಳಿಸಿದ್ದಾರೆ.
ನಮಗೆ ಪ್ರಧಾನಿಯವರು, ಅಗತ್ಯವಾದ ಸಿದ್ದತೆಗಳನ್ನು ಮಾಡಿಕೊಳ್ಳುವಂತೆ ಹಾಗೂ ಮುನ್ನೆಚ್ಚರಿಕಾ ಕ್ರಮಗಳನ್ನು ತೆಗೆದುಕೊಳ್ಳುವಂತೆಯೂ ಆಗಲೇ ಸೂಚನೆಗಳನ್ನು ನೀಡುತ್ತಿದ್ದರು. ತನ್ನ ಜನರನ್ನು ಪ್ರೀತಿಸುವ ನಾಯಕತ್ವದ ಲಕ್ಷಣ ಇದಾಗಿದೆ ಎಂದಿದ್ದಾರೆ.
ತಲಾ 2 ಸಾವಿರ ರೂಪಾಯಿಯಂತೆ 9 ಕೋಟಿ ರೈತರಿಗೆ ನೀಡಿದ್ದೇವೆ. ಇದನ್ನು ನಾವೆಲ್ಲರೂ ಅರ್ಥೈಸಿಕೊಳ್ಳಬೇಕು. ಕಾಂಗ್ರೆಸ್ ಕೇವಲ ಒಂದು ಬಾರಿ ಮಾತ್ರ ರೈತರ 57 ಸಾವಿರ ಕೋಟಿ ಸಾಲ ಮನ್ನಾ ಮಾಡಿತ್ತು. ಆದರೆ, ಪ್ರತಿ ವರ್ಷ ನಾವು ರೈತರಿಗೆ 60 ಸಾವಿರ ಕೋಟಿ ನೀಡುತ್ತಿದ್ದೇವೆ ಹಾಗೂ ಮುಂದಿನ ಹತ್ತು ವರ್ಷಗಳವರೆಗೆ ಇದನ್ನು ನೀಡಲಾಗುತ್ತದೆ ಎಂದು ಹೇಳಿದ್ದಾರೆ.
ಪ್ರಧಾನಿ ಮೋದಿ ಅವರು, ದೇಶದಲ್ಲಿ ಕೊರೊನಾ ವೈರಸ್ ಸಾಂಕ್ರಾಮಿಕ ಹರಡುವಿಕೆ ಆರಂಭವಾಗುತ್ತಿದ್ದಂತೆ 17 ಸಾವಿರ ಕೋಟಿ ಪ್ಯಾಕೇಜ್ ಘೋಷಿಸಿದರು. ದೇಶದಲ್ಲಿ 80 ಕೋಟಿ ಜನರಿಗೆ ಉಚಿತ ಪಡಿತರ ವಿತರಿಸಲಾಯಿತು. ದೇಶದ 20 ಕೋಟಿ ಮಹಿಳೆಯರ ಬ್ಯಾಂಕ್ ಖಾತೆಗಳಿಗೆ 500 ರೂ ಜಮೆ ಮಾಡಲಾಯಿತು. 5,000 ರೈಲುಗಳ ಮೂಲಕ 70 ಲಕ್ಷ ವಲಸೆ ಕಾರ್ಮಿಕರನ್ನು ಅವರ ಊರುಗಳಿಗೆ ಕಳುಹಿಸಲಾಗಿದೆ ಎಂದು ತಿಳಿಸಿದ್ದಾರೆ.