ಹುಬ್ಬಳ್ಳಿ, ಜೂ12 (DaijiworldNews/MSP): ಹುಬ್ಬಳ್ಳಿಯಲ್ಲಿ ಮೂವರು ಕಾಶ್ಮೀರಿ ವಿದ್ಯಾರ್ಥಿಗಳು ಪಾಕಿಸ್ತಾನದ ಪರ ಘೋಷಣೆ ಕೂಗಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಚಾರ್ಜ್ ಶೀಟ್ ಸಲ್ಲಿಸಲು ವಿಳಂಬ ಮಾಡಿದ ಆರೋಪದಲ್ಲಿ ಹುಬ್ಬಳ್ಳಿ ಗ್ರಾಮೀಣ ಪೊಲೀಸ್ ಠಾಣೆ ಇನ್ಸ್ ಪೆಕ್ಟರ್ ಜಾಕ್ಸನ್ ಡಿಸೋಜಾ ಅವರನ್ನು ಅಮಾನತು ಮಾಡಲಾಗಿದೆ.
ನಿಯಮದಂತೆ 90 ದಿನಗಳಲ್ಲಿ ಆರೋಪ ಪಟ್ಟಿ ಸಲ್ಲಿಸಬೇಕಿದ್ದರೂ ಸಹ ಅಮಾನತಿಗೊಳಗಾದ ಇನ್ಸ್ಪೆಕ್ಟರ್ ನಿಗದಿತ ಅವಧಿಯೊಳಗೆ ಚಾರ್ಜ್ ಶೀಟ್ ಸಲ್ಲಿಸಲು ವಿಫಲವಾಗಿದ್ದರು . ಅಲ್ಲದೆ ಪೊಲೀಸರ ನಿರ್ಲಕ್ಷದಿಂದಾಗಿ ದೇಶದ್ರೋಹದ ಪ್ರಕರಣ ಎದುರಿಸುತ್ತಿದ್ದ ಕಾಶ್ಮೀರಿ ವಿದ್ಯಾರ್ಥಿಗಳು ಜಾಮೀನಿನ ಮೇಲೆ ಅನಾಯಾಸವಾಗಿ ಬಿಡುಗಡೆ ಆಗಿದ್ದರು. ಹುಬ್ಬಳ್ಳಿಯ 2ನೇ ಜೆಎಮ್ಎಫ್ಸಿ ನ್ಯಾಯಾಲಯ ಕಾಶ್ಮೀರಿ ವಿದ್ಯಾರ್ಥಿಗಳಿಗೆ ಸಿಆರ್ಪಿಸಿ 167(2) ಅಡಿ ಷರತ್ತುಬದ್ಧ ಜಾಮೀನು ನೀಡಿತ್ತು. ಪಾಕಿಸ್ತಾನ ಪರ ಘೋಷಣೆ ಕೂಗಿದ್ದ ಕಾಶ್ಮೀರದ ತಾಲಿಬ್, ಆಮಿರ್, ಬಾಸಿತ್ ಎಂಬ ವಿದ್ಯಾರ್ಥಿಗಳು ಜಾಮೀನು ಪಡೆದು ಬಿಡುಗಡೆಯಾಗಿದ್ದರು. ಇದರಿಂದ ಸಾರ್ವಜನಿಕ ವಲಯದಲ್ಲಿ ಆರೋಪಿ ಯುವಕರ ವಿರುದ್ಧ ಹಾಗೂ ಪೊಲೀಸರ ವಿರುದ್ದವೂ ಆಕ್ರೋಶ ವ್ಯಕ್ತವಾಗಿತ್ತು.
ಇದೀಗ ಹುಬ್ಬಳ್ಳಿ ಗ್ರಾಮೀಣ ಠಾಣೆಯ ಇನ್ಸ್ಪೆಕ್ಟರ್ ಜಾಕ್ಸನ್ ಡಿಸೋಜಾ ಅವರನ್ನು ಅಮಾನತುಗೊಳಿಸಿ ಉತ್ತರ ವಲಯ ಐಜಿಪಿ ರಾಘವೇಂದ್ರ ಸುಹಾಸ್ ಆದೇಶಿಸಿದ್ದಾರೆ.