ಹಾಸನ, ಜೂ 12 (DaijiworldNews/PY) : ಮನೆಯನ್ನು ಬೈಪಾಸ್ ಕಾರಣಕ್ಕೆ ಒಡೆಯುತ್ತಾರೆ ಎನ್ನುವ ಸುದ್ದಿ ಕೇಳಿದ ಮನೆಯ ಯಜಮಾನ ತನ್ನ ಪ್ರೀತಿಯ ಮನೆಯನ್ನು ಉಳಿಸಿಕೊಳ್ಳಲು ಲಕ್ಷಾಂತರ ರೂಪಾಯಿ ಖರ್ಚು ಮಾಡಿ ಮನೆಯನ್ನೇ 120 ಅಡಿ ಮುಂದಕ್ಕೆ ಶಿಫ್ಟ್ ಮಾಡಿದ ಘಟನೆ ಹಾಸನದಲ್ಲಿ ನಡೆದಿದೆ.
ಹಾಸನ ಜಿಲ್ಲೆ, ಸಕಲೇಶಪುರ ತಾಲೂಕಿನ, ಬಾಳ್ಳುಪೇಟೆಯವರಾದ ಲೋಕೇಶ್ ಅವರು 2003ರಲ್ಲಿ ಒಂದು ಕೋಟಿಯಷ್ಟು ಹಣ ವ್ಯಯ ಮಾಡಿ ಬಾಳ್ಳುಪೇಟೆಯಲ್ಲಿ ಸುಂದರವಾದ ಮನೆ ನಿರ್ಮಾಣ ಮಾಡಿದ್ದರು. ರಸ್ತೆ ಪಕ್ಕದಲ್ಲೇ ಇವರ ವಿಶಾಲವಾದ ಜಾಗವಿತ್ತು. ಒಂದು ವೇಳೆ ರಸ್ತೆ ಅಗಲೀಕರಣ ಆದರೆಮನೆ ಒಡೆಯುವಂತಹ ಸಂದರ್ಭ ಬರಬಾರದೆನ್ನುವ ಕಾರಣದಿಂದ ರಸ್ತೆಯಿಂದ ಸುಮಾರು 100 ಮೀಟರ್ ಬಿಟ್ಟು ಮನೆ ಕಟ್ಟಿದ್ದರು.
ಸುಂದರವಾದ ನೆನಪುಗಳಿರುವ ಮನೆಯನ್ನು ರಾಷ್ಟ್ರೀಯ ಹೆದ್ದಾರಿ 75ರ ಹಾಸನದಿಂದ ಬಿ.ಸಿ.ರೋಡ್ವರೆಗೆ ಬೈಪಾಸ್ ರಸ್ತೆ ನಿರ್ಮಿಸುವ ಸಲುವಾಗಿ ಮನೆಯನ್ನು ಒಡೆಯಬೇಕು ಎನ್ನುವ ವಿಷಯ ಕೇಳಿದ ಯಜಮಾನ ಲೋಕೇಶ್ ಅವರಿಗೆ ಬೇಸರವಾಗಿದ್ದು. ಮನೆ ಉಳಿಕೊಳ್ಳುವ ಸಲುವಾಗಿ ಲೋಕೇಶ್ ಅವರು ಸಿಕ್ಕ ಸಿಕ್ಕ ಅಧಿಕಾರಿಗಳು, ರಾಜಕಾರಣಿಗಳ ಬಳಿ ತೆರಳಿ ಸಹಾಯ ಮಾಡಿ ಎಂದು ಮನವಿ ಮಾಡಿದ್ದರು. ಆದರೆ, ಕೊನೆಯದಾಗಿ ಬೈಪಾಸ್ ನಕ್ಷೆಯನ್ನು ಬದಲಾವಣೆ ಮಾಡಲು ಸಾಧ್ಯವಿಲ್ಲ ಎಂದು ತಿಳಿದ ಲೋಕೇಶ್ ಅವರು ತಮ್ಮ ಪ್ರೀತಿಯ ಮನೆಯನ್ನು ಉಳಿಸಿಕೊಳ್ಳು ಮನೆಯನ್ನೇ ಮುಂದಕ್ಕೆ ಶಿಫ್ಟ್ ಮಾಡಿಸುತ್ತಿದ್ದಾರೆ.
ಲೋಕೇಶ್ ಅವರ ಮನೆಯನ್ನು ಅದು ಇದ್ದ ಜಾಗದಿಂದ ಸುಮಾರು 20 ಅಡಿ ಮುಂದಕ್ಕೆ ಶಿಫ್ಟ್ ಮಾಡಲಾಗುತ್ತಿದ್ದು, ಟಿಡಿಬಿಡಿ ಕಂಪೆನಿಯವರು ಸುಮಾರು 35 ಲಕ್ಷ ವೆಚ್ಚದಲ್ಲಿ ಮನೆ ಶಿಫ್ಟ್ ಮಾಡಿಕೊಡಲು ಒಪ್ಪಿಕೊಂಡಿದ್ದಾರೆ. ಮನೆ ಶಿಫ್ಟ್ ಮಾಡುವ ಸಂದರ್ಭ ಏನಾದರೂ ಸಮಸ್ಯೆ ಆದರೆ ಆ ಸಮಸ್ಯೆಗಳಿಗೆ ಕಂಪೆನಿಯವರೇ ಸಂಪೂರ್ಣವಾದ ಹೊಣೆಯಾಗಬೇಕಾಗುತ್ತದೆ. ಕೊರೊನಾ ಕಾರಣದಿಂದ ಇಷ್ಟುದಿನ ಮನೆ ಶಿಫ್ಟಿಂಗ್ ಮಾಡಲು ತಡವಾಗಿದ್ದು, ಈಗ ಮನೆ ಶಿಫ್ಟಿಂಗ್ ಕಾರ್ಯ ಸಂಪೂರ್ಣವಾಗುವ ಹಂತದಲ್ಲಿದೆ.
ತನ್ನ ಪ್ರೀತಿಯ ಮನೆ ಇನ್ನೇನೂ ಬೈಪಾಸ್ ರಸ್ತೆ ಕಾರಣಕ್ಕಾಗಿ ನಾಶವಾಗಿ ಹೋಗುತ್ತದೆ ಎನ್ನುವ ನೋವಿನಲ್ಲಿದ್ದ ಲೋಕೇಶ್ ಕುಟುಂಬಕ್ಕೆ ಮನೆ ಶಿಫ್ಟ್ ಮಾಡಿಸುತ್ತಿರುವುದು ಸಂತೋಷವಾಗಿದೆ.