ಬಿಹಾರ, ಜೂ12 (DaijiworldNews/MSP): ನೇಪಾಳಿ ಸೇನೆ ಬಿಹಾರದ ಗಡಿಭಾಗದಲ್ಲಿ ಗುಂಡಿನ ದಾಳಿ ನಡೆಸಿದ ಪರಿಣಾಮ ಭಾರತದ ಓರ್ವ ಪ್ರಜೆ ಸಾವನ್ನಪ್ಪಿ ನಾಲ್ವರು ಗಾಯಗೊಂಡಿರುವ ಘಟನೆ ಶುಕ್ರವಾರ ನಡೆದಿದೆ.
ಜಿಲ್ಲೆಯ ಸೋನೆವಾರ್ಸಾ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಬರುವ ಪಿಪ್ರಾ ಪರ್ಸೈನ್ ಪಂಚಾಯತ್ನ ಲಾಲ್ಬಂದಿ-ಜಾಂಕಿ ನಗರ್ ಬಾರ್ಡರ್ನಲ್ಲಿ ಗುಂಡಿನ ಹಾರಾಟ ನಡೆಸಿದ್ದಾರೆ. ಅಷ್ಟೇ ಅಲ್ಲದೆ ಗಾಯಾಳು ವ್ಯಕ್ತಿಯೊಬ್ಬನನ್ನು ನೇಪಾಳ ಪೊಲೀಸರು ತಮ್ಮ ವಶಕ್ಕೆ ತೆಗೆದುಕೊಂಡಿದ್ದಾರೆ ಎಂದು ಹೆಚ್ಚುವರಿ ಪೊಲೀಸ್ ಮಹಾ ನಿರ್ದೇಶಕ ಜಿತೇಂದ್ರ ಕುಮಾರ್ ಸ್ಪಷ್ಟಪಡಿಸಿದ್ದಾರೆ.
ಪ್ರತ್ಯಕ್ಷದರ್ಶಿಗಳ ಹೇಳಿಕೆ ಪ್ರಕಾರ, ಲಾಲ್ ಬಂಡಿ ಪ್ರದೇಶದಲ್ಲಿ ಕೆಲವು ರೈತರು ಕೃಷಿ ಚಟುವಟಿಕೆಯಲ್ಲಿ ತೊಡಗಿದ್ದ ವೇಳೆ ನೇಪಾಳಿ ಸೈನಿಕರು ಗುಂಡಿನ ದಾಳಿ ನಡೆಸಿದ್ದರು. ಇದರ ಪರಿಣಾಮ ವಿಕೇಶ್ ಕುಮಾರ್(25) ಮೃತಪಟ್ಟಿದ್ದು, ಉಮೇಶ್ ರಾಮ್ ಹಾಗೂ ಉದಯ್ ಠಾಕೂರ್ ಬುಲೆಟ್ ತಗಲಿ ಗಾಯವಾಗಿದೆ.
ಭಾರತೀಯರು ನೇಪಾಳ ಗಡಿ ನುಸುಳಲು ಯತ್ನಿಸಿದ್ದರಿಂದ ಗುಂಡು ಹಾರಿಸಿರುವುದಾಗಿ ನೇಪಾಳಿ ಸೈನಿಕರು ಪ್ರತಿಕ್ರಿಯೆ ವ್ಯಕ್ತಪಡಿಸಿರುವುದಾಗಿ ವರದಿ ವಿವರಿಸಿದೆ.
ಇತ್ತೀಚೆಗಷ್ಟೇ ನೇಪಾಳ ಭಾರತದ ಪ್ರದೇಶಗಳಾದ ಲಿಪುಲೇಖ್ ಮತ್ತು ಕಾಲಾಪಾನಿ ಪ್ರದೇಶ ತನ್ನ ವ್ಯಾಪ್ತಿಗೆ ಸೇರಿದ್ದು ಎಂದು ಬಿಂಬಿಸಿ ಹೊಸ ನಕ್ಷೆಯನ್ನು ಬಿಡುಗಡೆ ಮಾಡಿತ್ತು. ಇದು ಭಾರತ ಮತ್ತು ನೇಪಾಳ ನಡುವೆ ಸಂಘರ್ಷಕ್ಕೆ ಎಡೆಮಾಡಿಕೊಟ್ಟಿತ್ತು. ನೇಪಾಳದ ಹಿಂದೆ ಚೀನಾ ಕುಮ್ಮಕ್ಕು ನೀಡಿ ಈ ರೀತಿ ಮಾಡಲಾಗುತ್ತಿದೆ ಎಂದು ವರದಿ ತಿಳಿಸಿದೆ