ನವದೆಹಲಿ, ಜೂ.13 (DaijiworldNews/MB) : ಕೊರೊನಾ ಹರಡುವುದನ್ನು ತಡೆಗಟ್ಟುವ ನಿಟ್ಟಿನಲ್ಲಿ ಭಾರತಕ್ಕೆ ಸುಮಾರು ಮೂರು ತಿಂಗಳಿನಿಂದ ವಿದೇಶಿಯರ ಪ್ರವೇಶಕ್ಕೆ ನಿರ್ಬಂಧ ವಿಧಿಸಲಾಗಿದ್ದು ಈಗ ಕೇಂದ್ರ ಗೃಹ ಸಚಿವಾಲಯವು ಐದು ವರ್ಗದ ವಿದೇಶಿಯರ ಭಾರತ ಪ್ರವೇಶಕ್ಕೆ ಅನುಮತಿ ನೀಡಿದೆ.
ಈ ಆದೇಶವನ್ನು ಹೊರಡಿಸಿರುವ ಗೃಹ ಸಚಿವಾಲಯದ ವಿದೇಶಾಂಗ ಇಲಾಖೆ, ಭಾರತದ ವ್ಯಕ್ತಿಯನ್ನು ಮದುವೆಯಾದ ವಿದೇಶಿಯರು, ಭಾರತದ ಪಾಸ್ ಪೋರ್ಟ್ ಹೊಂದಿರುವ ಅಥವಾ ಸಾಗರೋತ್ತರ ಭಾರತೀಯನಾಗಿರುವ ಅಪ್ರಾಪ್ತ ಮಕ್ಕಳ ವಿದೇಶಿ ಪೋಷಕರು ಸಿಂಗಲ್ ಪೇರೆಂಟ್ ಆಗಿದ್ದಲ್ಲಿ, ವಿದೇಶದ ವಿದ್ಯಾರ್ಥಿಯಾಗಿದ್ದು ಅವರ ಪೋಷಕರಲ್ಲಿ ಒಬ್ಬರಾದರೂ ಭಾರತೀಯನಾಗಿದ್ದರೆ ಅಥವಾ ಸಾಗರೋತ್ತರ ಭಾರತೀಯ ಕಾರ್ಡು ಹೊಂದಿದ್ದರೆ, ವಿದೇಶದಲ್ಲಿರುವ ಅಪ್ರಾಪ್ತ ಮಕ್ಕಳ ಪೋಷಕರಲ್ಲಿ ಒಬ್ಬರು ಭಾರತೀಯ ನಾಗರಿಕ ಅಥವಾ ಸಾಗರೋತ್ತರ ಭಾರತೀಯನಾಗಿದ್ದರೆ ಹಾಗೂ ವಿದೇಶಿ ರಾಜತಾಂತ್ರಿಕರ ಅವಲಂಬಿತ ಕುಟುಂಬ ಸದಸ್ಯರು ಮತ್ತು ವಿದೇಶಿ ರಾಜತಾಂತ್ರಿಕ ಕಾರ್ಯಾಚರಣೆಗಳು, ಕಾನ್ಸುಲರ್ ಕಚೇರಿಗಳು ಅಥವಾ ಭಾರತದಲ್ಲಿ ಮಾನ್ಯತೆ ಪಡೆದ ಅಂತರರಾಷ್ಟ್ರೀಯ ಸಂಸ್ಥೆಗಳ ಅಧಿಕೃತ ಸೇವಾ ಪಾಸ್ಪೋರ್ಟ್ ಹೊಂದಿರುವ ಸಿಬ್ಬಂದಿಗಳಿಗೆ ಭಾರತ ಪ್ರವೇಶ ಅವಕಾಶವನ್ನು ಕೇಂದ್ರ ಸರ್ಕಾರ ಕೊಟ್ಟಿದೆ.
ಹಾಗೆಯೇ ಈ ಐದು ವಿಭಾಗಗಳಿಗೆ ಸೇರಿದವರು ಭಾರತಕ್ಕೆ ಬರಬೇಕಾದ್ದಲ್ಲಿ ಭಾರತೀಯ ರಾಯಭಾರಿ ಕಚೇರಿಯಿಂದ ಹೊಸ ವೀಸಾಗಳನ್ನು ಪಡೆಯಬೇಕು ಎಂದು ವಿದೇಶಾಂಗ ಇಲಾಖೆ ತಿಳಿಸಿದೆ.
ಇನ್ನು ವಿದೇಶಿ ಪ್ರಜೆಗಳು ದೀರ್ಘಾವಧಿಯ ಬಹು ಪ್ರವೇಶ ವೀಸಾವನ್ನು ಹೊಂದಿದ್ದಲ್ಲಿ ಭಾರತೀಯ ರಾಜತಾಂತ್ರಿಕ ಕೇಂದ್ರಗಳಿಂದ ಮರು ಮೌಲ್ಯಮಾಪನ ಮಾಡಿಸಿದ ಬಳಿಕ ಭಾರತ ಪ್ರವೇಶಕ್ಕೆ ಅವಕಾಶ ನೀಡಲಾಗುತ್ತದೆ. ಆದರೆ ಅವರು ಈ ಮೊದಲೇ ಎಲೆಕ್ಟ್ರಾನಿಕ್ ವೀಸಾಗಳನ್ನು ಹೊಂದಿದ್ದರೆ ಅವರಿಗೆ ಅದರ ಮೂಲಕವಾಗಿ ಭಾರತ ಪ್ರವೇಶಕ್ಕೆ ಅವಕಾಶವಿಲ್ಲ ಎಂದು ಹೇಳಿದೆ.
ಕೇಂದ್ರ ಸರ್ಕಾರವು ಕಳೆದ ಮೇ 22 ರಂದು ಸಾಗರೋತ್ತರ ಭಾರತೀಯರಿಗೆ(ಒಸಿಐ) ಇದೇ ರೀತಿಯ ವಿನಾಯಿತಿ ನೀಡಿದ್ದು ವಿದೇಶಗಳಲ್ಲಿ ಸಿಲುಕಿರುವ ನಾಲ್ಕು ವರ್ಗದ ಸಾಗರೋತ್ತರ ಭಾರತೀಯರಿಗೆ ಭಾರತಕ್ಕೆ ಬರಲು ಅನುಮತಿ ನೀಡಲಾಗಿತ್ತು.