ಬೆಂಗಳೂರು, ಜೂ 13 (DaijiworldNews/MB) : "ಬಿಜೆಪಿಯವರು ನನ್ನಷ್ಟು ವರ್ಷ ರಾಜಕಾರಣ ಮಾಡಿ ತೋರಿಸಲಿ ನೋಡೋಣ" ಎಂದು ಕಾಂಗ್ರೆಸ್ ನಾಯಕ ಮಲ್ಲಿಕಾರ್ಜುನ ಖರ್ಗೆ ಬಿಜೆಪಿ ನಾಯಕರಿಗೆ ಸವಾಲೆಸೆದಿದ್ದಾರೆ.
'ರಾಜ್ಯಸಭೆ ಸದಸ್ಯರಾಗಿ ಅವಿರೋಧವಾಗಿ ಆಯ್ಕೆಯಾದ ಬಳಿಕ ಮಾತನಾಡಿದ ಅವರು, ''11 ಬಾರಿ ನೇರ ಚುನಾವಣೆಯಲ್ಲಿ ನಾನು ಗೆದ್ದಿದ್ದೇನೆ. ನಾನು ಜನಪರವಾದ ಕಾರಣದಿಂದ ಅಷ್ಟು ಭಾರೀ ಜನರು ನನ್ನನ್ನು ಆಯ್ಕೆ ಮಾಡಿದ್ದಾರೆ. ಈಗ ಮೊದಲ ಬಾರಿ ರಾಜ್ಯಸಭೆಗೆ ಆಯ್ಕೆಯಾಗಿದ್ದೇನೆ. ಹಾಗಿರುವಾಗ ಹಿಂಬಾಗಿಲ ರಾಜಕಾರಣ ಎಂದು ಹೇಳುವುದರಲ್ಲಿ ಯಾವುದೇ ಅರ್ಥವಿಲ್ಲ'' ಎಂದು ಹೇಳಿದರು.
''ಬಿಜೆಪಿಯವರು ನನ್ನ ವಿರುದ್ಧ ಹಿಂಬಾಗಿಲ ರಾಜಕಾರಣ ಎಂದು ಆರೋಪ ಮಾಡುತ್ತಿದ್ದಾರೆ. ಮೊದಲು ನಾನು ರಾಜಕಾರಣ ಮಾಡಿದಷ್ಟು ವರ್ಷ ಅವರು ರಾಜಕಾರಣ ಮಾಡಲಿ. ಅಷ್ಟಕ್ಕೂ ಅವರಲ್ಲಿ ಅಷ್ಟು ದೀರ್ಘ ಕಾಲ ರಾಜಕಾರಣ ಮಾಡಲು ಬಿಡ್ತಾರ?'' ಎಂದು ವಾಗ್ದಾಳಿ ನಡೆಸಿದರು.
ಕರ್ನಾಟಕದಿಂದ ತೆರವಾಗಿರುವ ರಾಜ್ಯಸಭೆಯ ನಾಲ್ಕು ಸ್ಥಾನಗಳಿಗೆ ಜಾತ್ಯಾತೀತ ಜನತಾ ದಳದ ಹೆಚ್. ಡಿ. ದೇವೇಗೌಡ, ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಪಕ್ಷದ ಎಂ. ಮಲ್ಲಿಕಾರ್ಜುನ ಖರ್ಗೆ, ಭಾರತೀಯ ಜನತಾ ಪಕ್ಷದ ಈರಣ್ಣ ಕಡಾಡಿ ಮತ್ತು ಅಶೋಕ ಗಸ್ತಿ ಅವರು ಶುಕ್ರವಾರ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.